ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್. ಯತೀಶ್ ಅವರ ನೇತೃತ್ವದಲ್ಲಿ ಹೊಂಡಾ ಬಿಗ್‌ವಿಂಗ್ ಮಂಗಳೂರು ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ಸೇಪ್ಟಿ ರೈಡ್ ಎಂಬ ಜಾಗೃತಿ ಅಭಿಯಾನವು ಜ.19ರಂದು ಉಜಿರೆ ಮತ್ತು ಬೆಳ್ತಂಗಡಿಯಲ್ಲಿ ನಡೆಯಿತು.
ಮಂಗಳೂರಿನಿಂದ ಚಾರ್ಮಾಡಿವರೆಗೆ ಸಾಗಿದ ಈ ಮೋಟಾರು ಸೈಕಲ್ ರ್‍ಯಾಲಿಯು ಬೆಳಗ್ಗೆ ಉಜಿರೆ ತಲುಪಿದ್ದು, ಅಲ್ಲಿಂದ ಚಾರ್ಮಾಡಿ ಘಾಟ್‌ನಲ್ಲಿರುವ ಬೆಳ್ತಂಗಡಿ ತಾಲೂಕಿನ ಗಡಿ ಭಾಗದವರೆಗೂ ಸಾಗಿ ಬಳಿಕ ಮತ್ತೆ ಸಂಜೆ ವೇಳೆಗೆ ಬೆಳ್ತಂಗಡಿ ನಗರದ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಲುಪಿತು.
ರ್‍ಯಾಲಿಯುದ್ದಕ್ಕೂ ಯುವಕರಿಗೆ ಮೋಟಾರು ಸೈಕಲ್ ಓಡಿಸುವ ಹುಮ್ಮಸ್ಸು ಹೆಚ್ಚು ಮಾಡುವುದರ ಜೊತೆಗೆ ಮೋಟಾರು ಸೈಕಲ್ ಓಡಿಸುವಾಗ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು, ಮೊಬೈಲ್ ಫೋನ್ ಬಳಸದಿರುವುದು ಹಾಗೂ ನಿಧಾನವಾಗಿ ಚಲಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಮೋಟಾರು ಸೈಕಲ್ ಚಲಾಯಿಸುವಾಗ ಈ ಎಲ್ಲಾ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಿದ್ದು, ಮೊಟಾರು ಸೈಕಲ್ ಅಪಘಾತಕ್ಕೆ ಹೆಚ್ಚಾಗಿ ಯುವ ಪೀಳಿಗೆ ಬಲಿಯಾಗುತ್ತಿರುವ ಕಾರಣ ಅವರ ಕುಟುಂಬದವರಿಗೆ ದುಃಖದ ಪರಿಸ್ಥಿತಿ ನಿರ್ಮಾಣವಾಗುವುದರ ಜೊತೆಗೆ ದೇಶಕ್ಕೆ ಯುವ ಜನಾಂಗದ ನಷ್ಟವುಂಟಾಗುತ್ತದೆ ಎಂದು ಆಘಾತ ವ್ಯಕ್ತಪರಿಸಿದರು.
ಈ ಮೋಟಾರು ಸೈಕಲ್ ರ್‍ಯಾಲಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯತೀಶ್ ಎನ್., ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಸುಬ್ಬಾಪುರ ಮಠ, ಬೆಳ್ತಂಗಡಿ ಪೊಲೀಸ್ ಠಾಣೆಯ ಉಪ ನೀರೀಕ್ಷಕರಾದ ಮುರಳೀಧರ ಎಂ, ಯಲ್ಲಪ್ಪ, ಸಂಚಾರಿ ಠಾಣೆಯ ಪಿ.ಎಸ್.ಐ. ಅರ್ಜುನ್, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಕಿಶೋರ್ ಹಾಗೂ ಸಮರ್ಥ್ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.