ಉಜಿರೆ: ವಿದ್ಯಾರ್ಥಿ ಜೀವನದಲ್ಲಿ ಕಲಿತ ಪಾಠ ಭವಿಷ್ಯದಲ್ಲಿ ನೆರವಿಗೆ ಬರುತ್ತದೆ. ಗುರುಗಳ ಮಾರ್ಗದರ್ಶನವನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದು ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜ. 22ರಂದು ವ್ಯವಹಾರ ಆಡಳಿತ (ಬಿಬಿಎ) ವಿಭಾಗ ಆಯೋಜಿಸಿದ್ದ ‘ಏಕತ್ವಮ್’ ಅಂತರ್ ತರಗತಿ ಫೆಸ್ಟ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
“ಕಾಲೇಜಿನಿಂದ ಹೊರಗೆ ಹೋದ ಬಳಿಕ ನಿಮ್ಮ ಜೀವನ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ನೀವು ವಿದ್ಯಾರ್ಥಿಯಾಗಿ ಕಲಿತ ಪಾಠಗಳು ನಿಮಗೆ ಜೀವನ ಕಲಿಸುತ್ತವೆ. ಒಂದು ದಿನ ನಿಮಗೆ ಶಿಕ್ಷಣ ನೀಡಿದವರನ್ನು ಕೂಡ ಎಂದೂ ಮರೆಯಬೇಡಿ. ಗುರುಗಳ ಮಾರ್ಗದರ್ಶನ ದಾರಿದೀಪವಿದ್ದಂತೆ” ಎಂದು ಅವರು ತಿಳಿಸಿದರು.
“ಉಜಿರೆಯ ‘ರತ್ನಮಾನಸ’ ಜೀವನ ಶಿಕ್ಷಣ ವಿದ್ಯಾರ್ಥಿನಿಲಯದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ‘ಕಷ್ಟ’ ಎನಿಸುತ್ತಿತ್ತು. ಆದರೆ ಯಾವಾಗ ಕೆಲಸಕ್ಕೆ ಸೇರಿದೆನೋ ಸ್ವಾವಲಂಬಿ ಬದುಕಿಗೆ ರತ್ನಮಾನಸದಲ್ಲಿ ಕಲಿತ ಪಾಠಗಳು ಸಹಕಾರಿಯಾದವು” ಎಂದರು. ಸ್ವಾವಲಂಬಿ ಜೀವನ ಸಾಗಿಸಲು ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದರು.
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದರು.
ಆರು ವಿವಿಧ ಸ್ಪರ್ಧೆಗಳು ನಡೆದಿದ್ದು, ತೃತೀಯ ಬಿ.ಎ. ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ತೃತೀಯ ಬಿ.ಸಿ.ಎ. ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮ ಸಂಯೋಜಕಿ, ವಾಣಿಜ್ಯ ನಿಕಾಯದ ಡೀನ್ ಹಾಗೂ ಬಿಬಿಎ ವಿಭಾಗ ಮುಖ್ಯಸ್ಥೆ ಶಕುಂತಲಾ, ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾಕುಮಾರಿ ಎಸ್.ವಿ., ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಬಾಬು ಕೆ.ಎನ್. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಶ್ಚಂದ್ರ ಕೆ. ಎಸ್. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ತೃತೀಯ ಬಿಬಿಎ ವಿದ್ಯಾರ್ಥಿಗಳಾದ ನಿಕ್ಷೇಪ್ ಸ್ವಾಗತಿಸಿ, ನಸ್ರೀನಾ ವಂದಿಸಿದರು. ತೃತೀಯ ವರ್ಷದ ವಿದ್ಯಾರ್ಥಿನಿ ಹರ್ಷಿಣಿ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿ ಸ್ಟೀವ್ ಕಾರ್ಯಕ್ರಮ ನಿರೂಪಿಸಿದರು