ಬೆಳ್ತಂಗಡಿ: ಸರಕಾರಿ ಶಾಲೆ ಅಭಿವೃದ್ಧಿಗೆ ಊರವರ ಕೊಡುಗೆ ಅಗತ್ಯ, ಜೊತೆಗೆ ಸರಕಾರಿ ಶಾಲಾ ಮಕ್ಕಳ ಶಿಕ್ಷಣ ಮತ್ತು ಕ್ರೀಡಾ ಬೆಳವಣಿಗೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು.ಬದುಕು ಕಟ್ಟೋಣ ತಂಡ ಸರಕಾರಿ ಶಾಲಾಭಿವೃದ್ಧಿಗೆ ಜೊತೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದು ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ, ರಾಜಕೇಸರಿ ಸಂಘಟನೆ ಸರಕಾರಿ ಶಾಲಾ ಮಕ್ಕಳ ಕುಟುಂಬವೊಂದಕ್ಕೆ ಮನೆ ನಿರ್ಮಿಸಲು ಮುಂದಾಗಿದ್ದು ಇದು ಮಾನವೀಯ ಸೇವೆ ಇದಕ್ಕೆ ಬದುಕುಕಟ್ಟೋಣ ತಂಡ ಕೈಜೋಡಿಸಲಿದ್ದು ನೊಂದವರ ಸೇವೆ ಮಾಡಿದಾಗ, ದೇವರ ಮೇಲೆ ನಂಬಿಕೆ ಇಟ್ಟಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಇದರ ಮಾಲಕ ಮೋಹನ್ ಕುಮಾರ್ ಹೇಳಿದರು.
ಅವರು ಜ.26 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ, ದ.ಕ .ಜಿ.ಪಂ ಶಾಲೆ ಅಟ್ಲಾಜೆ, ಸರ್ವೋದಯ ಪ್ರೆಂಡ್ಸ್ ಅಟ್ಲಾಜೆ ಇದರ ವತಿಯಿಂದ ಅಟ್ಲಾಜೆ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ, ವಾರ್ಷಿಕ ಕ್ರೀಡಾ ಕೂಟ ಮತ್ತು ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕೆ ಚಾಲನೆ, ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.
ಯುವ ಸಮಾಜ ಕೆಲವೊಂದು ಕಡೆ ತಪ್ಪುದಾರಿಗೆ ಹೊಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಸೇವೆಗೆ ಮುಂದಾಗಿ ಇತರರಿಗೆ ಪ್ರೇರಣೆಯಾಗುತ್ತಿದ್ದಾರೆ. ಯುವಕರು ತಮ್ಮ ಆದಾಯದಲ್ಲಿ ಕುಟುಂಬ ನಿರ್ವಹಣೆಯ ಜೊತೆ ಸ್ವಲ್ಪ ಅಂಶವನ್ನು ಸಮಾಜ ಸೇವೆಗೆ ಮೀಸಲಿಟ್ಟರೆ ಸುಂದರ ಸಮಾಜ ನಿರ್ಮಾಣವಾಗಲು ಸಾದ್ಯ ಎಂದರು.
ಅಳದಂಗಡಿ ಕ್ರುಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದಿನೇಶ್ ಪಿ ಕೆ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಸಿಗುವಷ್ಟು ಶಿಕ್ಷಣ ಪ್ರೋತ್ಸಾಹ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಸರಕಾರಿ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಸ್ಥಾನಕ್ಕೆ ಏರಿದವರು ಇದ್ದಾರೆ. ಸರಕಾರಿ ಶಾಲೆಯನ್ನು ಬೆಳೆಸುವ ಕಾರ್ಯ ಅಗತ್ಯವಿದೆ ಎಂದರು.
ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ ಯುವ ಸಮಾಜ ಸಮಾಜಸೇವೆಗೆ ಮುಂದಾಗಿದ್ದಾರೆಂದರೆ ಆ ಭಾಗದಲ್ಲಿ ಅಭಿವೃದ್ಧಿ ಮತ್ತು ಶಾಂತಿಯ ವಾತಾವರ ಇದೆ ಎಂದರ್ಥ, ಸರ್ವೋದಯ ಫ್ರೆಂಡ್ಸ್, ರಾಜಕೇಸರಿ ಸಂಘಟನೆ,ಬದುಕು ಕಟ್ಟೋಣ ತಂಡ ನಮ್ಮ ತಾಲೂಕಲ್ಲಿ ಇರುವುದೇ ನಮ್ಮ ತಾಲೂಕಿನವರ ಭಾಗ್ಯ ಎಂದರು.
ತೆಂಕಕಾರಂದೂರು ವಲಯದ ಸಿ.ಆರ್. ಪಿ ಕಿರಣ್ ಶುಭಹಾರೈಸಿದರು.ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಸುರೇಶ್ ಪೂಜಾರಿ ಹೇವ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಜಯಾನಂದ ಪೆರಾಜೆ, ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ಅಟ್ಲಾಜೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಂತೋಷ್ ಕೊಂಗುಲ ,ರಾಜಕೇಸರಿ ಸಂಘಟನೆಯ ಸ್ಥಾಪಕಾದ್ಯಕ್ಷ ದೀಪಕ್ ಜಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಸಂಚಾಲಕ ಹರೀಶ ವೈ ಸ್ವಾಗತಿಸಿ, ಶಿಕ್ಷಕಿ ಶ್ವೇತಾ ಡಿ ವಂದಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್,ಮಾಜಿ ಅಧ್ಯಕ್ಷೆ ರತ್ನಾ ಹೇವ, ಚಿತ್ರ ನಿರ್ದೇಶಕ ವಿನು ಬಳಂಜ,ಹಿರಿಯರಾದ ರವೀಂದ್ರ ಪೂಜಾರಿ ಹೇವ,ಶ್ಯಾಮ್ ಬಂಗೇರ ಪೆರಾಜೆ,ಬಳಂಜ ಗ್ರಾ.ಪಂ ಸದಸ್ಯೆ ಸುಚಿತ್ರಾ ಹಾಗೂ ಇತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ರಾಜಕೇಸರಿ ಸಂಘಟನೆಯ ಸ್ಥಾಪಕಾದ್ಯಕ್ಷ ದೀಪಕ್ ಜಿ, ಹಿರಿಯ ವಾಲಿಬಾಲ್ ಆಟಗಾರ ಅಶೋಕ್ ಪೆರಾಜೆ, ಬಳಂಜ ವೀರಕೇಸರಿ ಹಿಂದೂಪುರ ಸಂಘಟನೆಯ ಪದ್ಮನಾಭ ಕುಲಾಲ್, ಅಂತರ್ ರಾಜ್ಯ ಬೈಕ್ ರೈಡರ್ ಸಂತೋಷ್ ಪೂಜಾರಿ ಇವರನ್ನು ಗೌರವಿಸಲಾಯಿತು.