ಬೆಳ್ತಂಗಡಿ: ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಪೆನ್ಸಿಲ್ವೇನಿಯ ಯುನಿರ್ವಸಿಟಿಯ 12 ಮಂದಿ ವಿದ್ಯಾರ್ಥಿಗಳ ತಂಡವು ಯುನಿರ್ವಸಿಟಿಯ ಹಿರಿಯ ಪ್ರೊಫೆಸರ್ ಫೆಮಿದಹ್ಯಾಂಡಿ ಮತ್ತು ನಿಟ್ಟೆಯ ವಿನೋದ್ ದೀಕ್ಷಿತ್ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.
ಮೊದಲ ದಿನ ಪ್ರಗತಿಬಂಧು ಸಂಘ, ಮಹಿಳಾ ಸ್ವಸಹಾಯ ಸಂಘ, ಮಾದರಿ ಕೃಷಿಕರು, ಒಕ್ಕೂಟ ವ್ಯವಸ್ಥೆ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಬಗ್ಗೆ ಉಡುಪಿ ತಾಲೂಕಿನಲ್ಲಿ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡನೇ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ). ಇದರ ಅಧ್ಯಕ್ಷ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರನ್ನು ಭೇಟಿ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಯ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರು.
ನಂತರ ಯೋಜನೆಯ ಕೇಂದ್ರ ಕಛೇರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳು, ಯೋಜನೆಯು ಗ್ರಾಮೀಣಭಿವೃದ್ಧಿಯಲ್ಲಿ ಯಾವ ರೀತಿ ಮಹತ್ವದ ಪಾತ್ರ ವಹಿಸಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಿಂದ ಗ್ರಾಮಗಳಲ್ಲಾದ ಬದಲಾವಣೆಯ ಬಗ್ಗೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಯೋಜನೆಯು ನೀಡಿದ ಕೊಡುಗೆಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು ಮತ್ತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ನಂತರ ಉಗ್ರಾಣ ಕಾರ್ ಮ್ಯುಸಿಯಂ ಭೇಟಿ ನೀಡಿದ ತಂಡಕ್ಕೆ ಕ್ಷೇಮವನದ ಸಿಇಒ ಶ್ರೀಮತಿ ಶ್ರದ್ಧಾ ಅಮಿತ್ ಇವರು ಸೂಕ್ತ ವಿವರಣೆಯೊಂದಿಗೆ ಮಾಹಿತಿ ನೀಡಿದರು. ತಂಡದ ನಿರ್ವಹಣೆಯನ್ನು ಮಾನವ ಸಂಪನ್ಮೂಲ ವಿಭಾಗದ ಯೋಜನಾಧಿಕಾರಿ ಶ್ರೀನಿವಾಸ.ಪಿ ನಡೆಸಿದರು.