ಬೆಳ್ತಂಗಡಿ : ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ಆಡಳಿತ ತೆರೆದಿಟ್ಟ ಚರಂಡಿಯನ್ನು ದಾಟುವ ವೇಳೆ ಕುಸಿದು ಬಿದ್ದು ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಮನೆಯಲ್ಲಿ ಮಲಗಿದಲ್ಲೇ ವಿಶ್ರಾಂತಿಯಲ್ಲಿರುವ ಕುವೆಟ್ಟು ಗ್ರಾಮದ ಬಡ ಮಹಿಳೆಯ ಚಿಕಿತ್ಸೆಗಾಗಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಬಾಡಿಗೆದಾರರು ಸಂಗ್ರಹಿಸಿದ ಸಹಾಯಧನವನ್ನು ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಲಕ್ಷ್ಮಿ ಎಂಬವರು ಚರಂಡಿ ದಾಟುವ ವೇಳೆ ಬಿದ್ದು ಕಾಲು ಮುರಿತಕ್ಕೊಳಗಾಗಿ
ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನೋಟರಿ ವಕೀಲರೊಬ್ಬರ ಕಚೇರಿಗೆ ಮಗಳೊಂದಿಗೆ ಬಂದಿದ್ದ ಮಹಿಳೆ ಚರಂಡಿ ದಾಟಿ ಬರುವಾಗ ಕಾಲು ಜಾರಿ ಬಿದ್ದಿದ್ದರು.
ಖಾಸಗಿ ವಾಣಿಜ್ಯ ಕಟ್ಟಡದ ಮಾಲಕರು ಕಾನೂನು ಮೀರಿದ್ದಾರೆ ಕಟ್ಟಡ ನಿಯಮ ಪಾಲಿಸಿಲ್ಲ, ಸಮರ್ಪಕ ಚರಂಡಿ ಮತ್ತು ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿಲ್ಲ ಎಂಬ ಏಕೈಕ ನೆಪದಲ್ಲಿ ಪಟ್ಟಣ ಪಂಚಾಯತ್ ಸುಮಾರು ಮೂರು ತಿಂಗಳ ಹಿಂದೆ ಕಟ್ಟಡದ ಎರಡು ದಿಕ್ಕುಗಳ ಚರಂಡಿಯುದ್ದಕ್ಕೂ ಅಳವಡಿಸಲಾಗಿದ್ದ ಚಪ್ಪಡಿ ಕಲ್ಲುಗಳನ್ನು ಅಗೆದು ಚರಂಡಿಯನ್ನು ತೆರೆದಿಟ್ಟು ಹಾಗೆ ಬಿಟ್ಟ ಪರಿಣಾಮ ಮಹಿಳೆ ಚರಂಡಿ ದಾಟುವ ವೇಳೆ ಬಿದ್ದು ಆಸ್ಪತ್ರೆ ಸೇರುವಂತಾಗಿತ್ತು.
ಚರಂಡಿ ಪುರಾಣ ಪಟ್ಟಣ ಪಂಚಾಯತ್ ಮತ್ತು ಕಟ್ಟಡ ಮಾಲಕರಿಗೆ ಆಟ, ಬಾಡಿಗೆದಾರರಿಗೆ , ನಾಗರಿಕರಿಗೆ ಪ್ರಾಣ ಸಂಕಟ ಎಂಬಂತಾಗಿದ್ದು ಸಮಸ್ಯೆ ಇಂದಿಗೂ ಬಗೆಹರಿದಿಲ್ಲ.
ಚರಂಡಿ ದಾಟುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ 20 ದಿನಗಳ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಬಡ ಮಹಿಳೆಯಾದ ಲಕ್ಷ್ಮಿ ಅವರ ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ.
ಈ ಮಧ್ಯೆ ಲಕ್ಷ್ಮಿ ಅವರ ಚಿಕಿತ್ಸೆಗೆ ಆರ್ಥಿಕ ಸಹಾಯಕ್ಕಾಗಿ ಪಟ್ಟಣ ಪಂಚಾಯತ್ ಆಡಳಿತಕ್ಕೂ ಹಾಗೂ ಕಟ್ಟಡ ಮಾಲಕರಿಗೂ ಮಹಿಳೆಯ ಮಗಳು ಮನವಿ ಮಾಡಿಕೊಂಡಿದ್ದರೂ ಕಟ್ಟಡ ಮಾಲಕರಿಂದಾಗಲಿ ಪಟ್ಟಣ ಪಂಚಾಯತ್ ನಿಂದಾಗಲಿ ಇದುವರೆಗೆ ಕುಟುಂಬಕ್ಕೆ ಯಾವುದೇ ಆರ್ಥಿಕ ಸ್ಪಂದನೆ ಸಿಗದ ಕಾರಣ ಇದೀಗ ವಿಘ್ನೇಶ್ ಸಿಟಿ ಕಟ್ಟಡದ ಬಾಡಿಗೆದಾರರು ಸ್ವಯಂಪ್ರೇರಣೆಯಿಂದ ಸಂಗ್ರಹಿಸಿದ ಧನ ಸಹಾಯವನ್ನು ಹಸ್ತಾಂತರಿಸಿದರು.
ಈ ಸಂದರ್ಭ ವಕೀಲರಾದ ಶೈಲೇಶ್ ಠೋಸರ್, ಶ್ರೀನಿವಾಸ ಗೌಡ, ಸೇವಿಯರ್ ಪಾಲೇಲಿ, ಲಕ್ಷ್ಮಿ ನಾರಾಯಣ ಶೆಣೈ ಹಾಗೂ ಭಗತ್ ರಾಮ್, ಶಿವಾನಂದ , ಪೂವಪ್ಪ ಭಂಡಾರಿ, ಅಶೋಕ ಮತ್ತಿತರರು ಇದ್ದರು.