ಬೆಳ್ತಂಗಡಿ: ಕಾನ್ಶಿರಾಮ್, ಪೆರಿಯಾರ್, ಅಂಬೇಡ್ಕರ್ ಅವರ ಆಶಯಗಳನ್ನೊತ್ತ ‘ಸಮ ಸಮಾಜದ’ ಕಲ್ಪನೆಯ ಪರ್ಯಾಯ ರಾಜಕೀಯ ಚಿಂತನೆ, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಟಕ್ಕಾಗಿ ಪ್ರತ್ಯೇಕವಾದ ಒಂದು ರಾಜಕೀಯ ಶಕ್ತಿಯ ಅನಿವಾರ್ಯತೆ ಇದೆ ಎಂದು ಚಲನಚಿತ್ರ ನಟ, ಅಂಬೇಡ್ಕರ್ ವಾದಿ, ಚಳವಳಿಗಾರ ಚೇತನ್ ಅಹಿಂಸಾ ಪ್ರತಿಪಾದಿಸಿದರು.
ರಾಜ್ಯಾದ್ಯಂತ ಸಮಾನ ಮನಸ್ಕರ ಜೊತೆ ಸಂವಾದ ಹಾಗೂ ಸುತ್ತು ಚರ್ಚೆ ನಡೆಸುತ್ತಿರುವ ಅವರು ಫೆ.17 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಸಂಘ ಸಂಸ್ಥೆ ಹಾಗೂ ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಿದರು.
ಸಂವಾದಕ್ಕೂ ಮುನ್ನ ಪಿಪಿಟಿ ಮೂಲಕ ತಮ್ಮ ವಿಚಾರವನ್ನು ಮುಂದಿಟ್ಟ ಅವರು, ಪ್ರಯತ್ನದ ಮೂಲಕ ಬದಲಾವಣೆ ತರಲು ಸಾಧ್ಯವಿದೆ. ಹಿಂಧುತ್ವ, ಜಾತಿ ಇವುಗಳನ್ನೂ ಮೀರಿ ಜನಶಕ್ತಿ ರೂಪುಗೊಂಡರೆ ಹೊಸ ಶಕ್ತಿ ಉದಯಿಸುತ್ತದೆ. ಶೇ.35 ರಷ್ಟು ಮಂದಿಯ ಶಕ್ತಿ ನಮ್ಮನ್ನು ಆಳುತ್ತಿದೆ. ಆದರೆ ಅದರ ವಿರುದ್ಧ ಇರುವ ಶೇ. 65 ಮಂದಿಯ ಬಹುತ್ವ ಒಟ್ಟಾಗಿ ಏಕತ್ವವಾದರೆ ಇಲ್ಲಿ ಪರ್ಯಾಯ ಸ್ಥಿತಿ ನಿರ್ಮಾಣವಾಗುತ್ತದೆ. ಅದನ್ನು ಅರ್ಥೈಸುವ ಚಿಂತನೆಗೆ ಶಕ್ತಿ ಬರಬೇಕಾಗಿದೆ.
ಓಟು ದುಡ್ಡು ತೆಗೆದುಕೊಂಡು ಹಾಕಲು ಇರುವುದಲ್ಲ. ಅದು ಭಾವನೆ. ಇಂದು ನಮ್ಮ ದೇಶದಲ್ಕಿ 1500 ರಷ್ಟು ರಾಜಕೀಯ ಪಕ್ಷಗಳು ಸಂವಿಧಾನದಡಿ ಇದ್ದರೂ ಸಂವಿಧಾನ ಉಳಿಸಲು ಯಾರೂ ಪ್ರಯತ್ನ ಮಾಡುತ್ತಿಲ್ಲ ಎಂಬುದು ಖೇದಕರ.
ಕುಟುಂಬ ರಾಜಕಾರಣ, ಹಿಂದುತ್ವ ಆಧಾರಿತ ಹಾಗೂ ಇನ್ನೂ ಕೆಲವು ಓಲೈಕೆ ರಾಜಕಾರಣ ಮಾಡಿ ತಾವು ಅಧಿಕಾರಕ್ಕೆ ಬಂದ ನಂತರ ತಮ್ಮನ್ನು ಬೆಂಬಲಿಸಿದವರಿಗಾಗಿನ ಯೋಜನೆಗಳನ್ನು ರೂಪಿಸುತ್ತಿಲ್ಲ. ಆದ್ದರಿಂದ ಬಹುಜನ ಪರಿಕಲ್ಪನೆ ಮತ್ತು ‘ಸಮ ಸಮಾಜ’ದ ನಿರ್ಮಾಣ ಆಗಬೇಕು. ಉಳ್ಳವರನ್ನು ಇನ್ನೂ ಮೇಲಕ್ಕೆ ಏರದಂತೆ ಮಧ್ಯಮಕ್ಕೆ ಇಳಿಸಿ, ತಳಮಟ್ಟದಲ್ಲಿರುವವರನ್ನು ಮೇಲಕ್ಕೆತ್ತಿ ಎಲ್ಲರನ್ನೂ ಸಮಾನ ರೇಖೆಗೆ ತಂದರೆ ದೇಶ ಸಮಾಸಮಾಜವಾಗಿ ಬೆಳೆಯುತ್ತದೆ ಎಂದರು.
ಸಂವಾದದಲ್ಲಿ ವಿವಿಧ ಸಂಘಟನೆ ಹಾಗೂ ಪಕ್ಷಗಳ ಮುಖಂಡರುಗಳಾದ ರಮೇಶ್ ಆರ್, ಬಿ.ಕೆ ವಸಂತ, ರಘು ಧರ್ಮಸೇನ, ಶಫಿ ಬಂಗಾಡಿ, ಹರೀಶ್ ಕುಮಾರ್ ಲಾಯಿಲ, ಜಗನ್ನಾಥ ಲಾಯಿಲ, ಉಮೈರಾ ಬಾನು, ಸಂಜೀವ ಆರ್, ಶೇಖರ್ ಕುಕ್ಕೇಡಿ, ಶಿವ ಕುಮಾರ್ ಎಸ್.ಎಂ, ಚೆನ್ನಕೇಶವ, ಪ್ರಶಾಂತ್ ಬೆಳ್ತಂಗಡಿ, ಶ್ರೀನಿವಾಸ್, ರಾಜೀವ್ ಕಕ್ಕೆಪದವು, ಸತೀಶ್ ಬೆಳುವಾಯಿ, ಸದಾನಂದ ನಾಲ್ಕೂರು, ವೆಂಕಣ್ಣ ಕೊಯ್ಯೂರು, ನಾಗರಾಜ ಲಾಯಿಲ, ನಾಗೇಶ್ ಬಾಂಜಾರು, ಅಶ್ರಫ್ ಆಲಿಕುಂಞಿ ಮುಂಡಾಜೆ, ಆಚುಶ್ರೀ ಬಾಂಗೇರು ಮೊದಲಾದವರು ಸಂವಾದದಲ್ಲಿ ಭಾಗವಹಿಸಿದರು.
ಶೇಖರ್ ಲಾಯಿಲ ಕಾರ್ಯಕ್ರಮ ಸಂಯೋಜಿಸಿದರು. ಹಿರಿಯ ಪತ್ರಕರ್ತ ಹಾಗೂ ಪ್ರಗತಿಪರ ಚಳವಳಿಗಾರ ಶಿಬಿ ಧರ್ಮಸ್ಥಳ ಸ್ವಾಗತಿಸಿ ಬರಮಾಡಿಕೊಂಡರು.