ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಂ. ಕೆ ಫೈಝಿ ಯವರನ್ನು ಕೇಂದ್ರ ಸರ್ಕಾರವು ದೆಹಲಿಯಲ್ಲಿ ಅಕ್ರಮ ಬಂಧನ ಮಾಡಿರುವುದರ ವಿರುದ್ಧ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ರಾತ್ರಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ, ಇಡಿ, ಎನ್ ಐಎ ಗಳು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿ ತನ್ನ ಮೌಲ್ಯ ಹಾಗೂ ಜನರಿಗಿರುವ ಭರವಸೆಯನ್ನು ಕಳೆದುಕೊಂಡಿದೆ. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ 2024ನ್ನು ಸಂಸತ್ತಿನಲ್ಲಿ ಮಂಡನೆ ಮಾಡಲು ತಯಾರಿ ನಡೆಸುತ್ತಿದ್ದು, ಇದರ ವಿರುದ್ಧವಾಗಿ ಎಸ್‌ಡಿಪಿಐ ಪಕ್ಷವು ರಾಷ್ಟ್ರ ವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುದಕ್ಕೆ ಹೆದರಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಅಕ್ರಮ ಬಂಧನ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ನಾಯಕರ ಬಂಧನ ಖಂಡನೀಯ ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ ನೇತೃತ್ವದಲ್ಲಿ ಪುಂಜಾಲಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಕಣಿಯೂರು ಬ್ಲಾಕ್ ಕಾರ್ಯದರ್ಶಿ ಹನೀಫ್ ಟಿ. ಎಸ್ ಮಾತನಾಡಿದರು.
ಕಲ್ಲೇರಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್ ವಹಿಸಿದ್ದರು.

ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಬ್ಲಾಕ್ ಪದಾಧಿಕಾರಿಗಳು, ಬ್ರಾಂಚ್ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಿತೈಷಿಗಳು ಪಾಲ್ಗೊಂಡಿದ್ದರು.