ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ ಮಾ.13 ರಂದು ಗೂಗಲ್ ಮೀಟ್‌ನಲ್ಲಿ ಮಾತೃ ದೇವೋ ಭವ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಾರದಾ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷೆ ಶ್ರೀಮತಿ ಆಶಾ ಅಡೂರು ಪ್ರಾರಂಭಿಸಿದರು.
ಸಂಸಾರ/ಸಮಾಜದ ವ್ಯವಸ್ಥಿತ ಸ್ವರೂಪದ ಚೈತನ್ಯಕ್ಕೆ ಚೇತನಾ ಶಕ್ತಿ ಪುರುಷನಾದರೆ ಬೆಳಕಾಗಿ ಸ್ತ್ರೀ ಹೊಳೆಯುವಳು. ಸಮಾನತೆ ಬೇಕು ಎಂಬ ಸಂಘಟನೆಯಿಂದ ತನ್ನೊಳಗಿನ ತನ್ನನ್ನೇ ಮರೆಯುತ್ತಿದ್ದಾಳೆ ಸ್ತ್ರೀ. ಮಹಿಳಾ ದಿನಾಚರಣೆ ನಮ್ಮ ಸಂಸ್ಕೃತಿ ಖಂಡಿತ ಅಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮನ್ನು ನಾವು ತೊಡಗಿಸಿಕೊಂಡು ಮೌಲ್ಯವನ್ನು ಕಾಣದೇ ಕುರುಡರಾಗೋ ಪರಿಸ್ಥಿತಿ ಎದುರಾಗಿದೆ. ತನ್ನೊಳಗೆ ತಾನು ಹೊಕ್ಕು, ತನ್ನನ್ನು ತಾನು ಗೌರವಿಸುವುದನ್ನು ಕಲಿತು ನಂಬಿಕೆಯಿಂದ ಮುಂದುವರೆದಾಗ ಸ್ತ್ರೀಗೆ ತನಗೆ ಇರುವ ಮಹತ್ವದ ಅರಿವು ಮೂಡುತ್ತದೆ. ಹೀಗಾದಾಗ ಹೋರಾಟಗಳನ್ನು ಮಾಡುವ ಸಂದರ್ಭಗಳು ಸೃಷ್ಟಿಯಾಗಲಾರದು. ಒಟ್ಟಿನಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ರೂಢಿಸಿಕೊಂಡು ಮುನ್ನಡೆದಾಗ ಮಾತ್ರ ಏಳಿಗೆಯೆಂಬ ಮೆಟ್ಟಿಲೇರಿ ಸಾಧನೆ ಮಾಡಲು ಸಾಧ್ಯ ಎಂಬುದಾಗಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ವಕೀಲರು, ಕವಯಿತ್ರಿ, ವಿಮರ್ಶಕಿ ಹಾಗೂ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಸಂಸ್ಥಾಪಕಿ ಪರಿಮಳಾ ರಾವ್ ಇವರು ತಮ್ಮ ಉಪನ್ಯಾಸದ ನೆಲೆಯಲ್ಲಿ ಹೆಣ್ಣಿನ ಮಹತ್ವದ ಬಗ್ಗೆ ನುಡಿಗಳನ್ನಾಡಿದರು.
ಅಭಾಸಾಪ ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ, ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಬೆಳ್ತಂಗಡಿ ಹಾಗೂ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಪ್ರಕಾರದ ಪ್ರಮುಖ್ ಶ್ರೀಮತಿ ವನಿತಾ ಶೆಟ್ಟಿ ಸ್ವಾಗತಿಸಿ, ಘಟಕದ ಕೋಶಾಧಿಕಾರಿ ಶ್ರೀಮತಿ ನಯನಾ ಟಿ ಧನ್ಯವಾದವನ್ನಿತ್ತರು. ಕಾರ್ಯದರ್ಶಿ ಶ್ರೀಮತಿ ಮೇಘನಾ ಪ್ರಶಾಂತ್ ಕಾರ್ಯಕ್ರಮವನ್ನು ನಿರ್ವಹಿಸಿದರು.