ಬೆಳ್ತಂಗಡಿ: ರೈತರು ಗ್ರಾಮೀಣ ಕ್ರೀಡೆಯಾಗಿ ಆಚರಣೆ ಮಾಡಿಕೊಂಡು ಬರತಕ್ಕಂತ ಕಂಬಳ ಇಂದು ವಿಶ್ವ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.ವೇಣೂರು- ಪೆರ್ಮುಡ ಕಂಬಳ ಅನೇಕ ವಿಶೇಷತೆಯಿಂದ ಕೂಡಿದ್ದು ಮಾ.30 ರಂದು ಎಲ್ಲರ ಕೂಡುವಿಕೆಯಿಂದ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಮಾ.26 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ವೇಣೂರು-ಪೆರ್ಮುಡ ೩೨ನೆ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 32 ವರ್ಷಗಳ ಹಿಂದೆ ದಿ.ವಸಂತ ಬಂಗೇರರವರು ಅಂದಿನ ಕಾಲದಲ್ಲಿ ಕಂಬಳ ಪ್ರಾರಂಭಿಸಿ, ಜೊತೆ ಇದ್ದವರಿಗೆ ಅಧ್ಯಕ್ಷತೆ ನೀಡಿದ್ದಾರೆ. ಇದರಿಂದ ಹಲವಾರು ಮಂದಿ ಅಧ್ಯಕ್ಷತೆ ಆಗಿದ್ದಾರೆ ಎಂದರು.
ಈ ಸಲ ಕಂಬಳವು ಯುಗಾದಿ,ರಂಜಾನ್ ಸಮಯದಲ್ಲಿ ಬಂದಿದ್ದು ಸೌಹಾರ್ದತೆಯಿಂದ ನಡೆಯಲಿದ್ದು ಎಲ್ಲಾ ಧರ್ಮದ ಧರ್ಮಗುರುಗಳನ್ನು ಆಹ್ವಾನಿಸಲಿದ್ದೇವೆ.
ಕಂಬಳದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ನೇರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್ ಕೋಟ್ಯಾನ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಸಚಿವರಾದ ದಿನೇಶ್ ಗುಂಡೂರಾವ್,ಸಂತೋಷ್ ಲಾಡ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ಮಾಜಿ ಸದಸ್ಯ ಹರೀಶ್ ಕುಮಾರ್,ಮಾಜಿ ಸಚಿವ ರಮಾನಾಥ ರೈ,ಶಾಸಕ ಅಶೋಕ್ ಕುಮಾರ್ ರೈ,ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸಹಿತ ವಿವಿಧ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಚಲನ ಚಿತ್ರ ನಟ ನಟಿಯರು,ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ ಎಂದರು.
ಪೆರ್ಮುಡ ಕಂಬಳದಲ್ಲಿರುವ ವಿಶೇಷತೆಗಳು: ಸುಮಾರು ಏಳೂವರೆ ಎಕ್ರೆ ಜಾಗ ಕಂಬಳಕ್ಕೆ ಬಳಕೆ,ಕೋಣಗಳಿಗೆ ಅತೀ ಹೆಚ್ಚು ಜಾಗ ಮೀಸಲು,ಒಂದೂವರೆ ಎಕ್ರೆ ಜಾಗದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ,
ಅಚ್ಚುಕಟ್ಟಾದ ನೀರಿನ ವ್ಯವಸ್ಥೆ, ಎಲ್.ಇ.ಡಿ ಪರೆದೆಯಲ್ಲಿ ಕಂಬಳ ವೀಕ್ಷಣೆ,ಹೋಟೇಲ್ ವ್ಯವಸ್ಥೆ ಕಲ್ಪಿಸಲಾಗುವುದು,ಪವಿತ್ರ ಪಲ್ಗುಣಿ ನದಿ ತೀರದಲ್ಲಿ ಕಾರಂಜಿಯ ಝೇಂಕಾರ, ಆಗಮಿಸುವ ಕಂಬಳ ಪ್ರೇಮಿಗಳಿಗಾಗಿ ಬೋಡಿಂಗ್ ರೈಡ್ ಅಳವಡಿಕೆ,ಗ್ರಾಮೀಣ ಭಾಗದ ಖಾದ್ಯಗಳ ವಿಶೇಷ ಆಹಾರ ಮಳಿಗೆ,ಸಂತೆ ಮಾರುಕಟ್ಟೆ,ಮಹಿಳೆಯರಿಗೆ ಕಂಬಳ ವೀಕ್ಷಣೆಗೆ ಗೌಲರಿ ಸೌಲಭ್ಯ,ಆಗಮಿಸುವ ಕಂಬಳ ಕೋಣಗಳ ಮಾಲಕರಿಗೆ ವಿಶೇಷ ಉಡುಗೋರೆ ನೀಡಲಿದ್ದೇವೆ ಎಂದು ರಕ್ಷಿತ್ ಶಿವರಾಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಮಹಾ ಪೋಷಕ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಕೋಶಾಧಿಕಾರಿ ಅಶೋಕ್ ಪಾಣೂರು, ಉಪಾಧ್ಯಕ್ಷರಾದ ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.