ಉಜಿರೆ: ಕಡು ಬಡತನದಿಂದ ಬಂದು ಜೀವನದ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಇತಿಹಾಸದ ಕ್ಷೇತ್ರದಲ್ಲಿ ಮಹಾನ್ ಸಾಧನೆಯನ್ನು ಗೈದಂತಹ ಡಾ. ಪಾದೂರು ಗುರುರಾಜ್ ಭಟ್ ರವರು ಕರಾವಳಿ ಕರ್ನಾಟಕದ ಇತಿಹಾಸ ವಿದ್ಯಾರ್ಥಿಗಳಿಗೆ ಸದಾಕಾಲ ಮಾದರಿಯಾಗಿ ಇರಬಲ್ಲವರು ಎಂದು ಡಾ. ಪುಂಡಿಕಾಯಿ ಗಣಪಯ್ಯ ಭಟ್ ರವರು ತಿಳಿಸಿದರು.

ಉಜಿರೆಯ ಎಸ್ ಡಿ ಎಮ್ ಕಾಲೇಜಿನ ಇತಿಹಾಸ ವಿಭಾಗದಲ್ಲಿ “ಇತಿಹಾಸ ನಿರ್ಮಿಸಿದ ಇತಿಹಾಸಕಾರ” ಡಾ. ಪಾದೂರು ಗುರುರಾಜ್ ಭಟ್ ರವರ ಶತಮಾನದ ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ವಕ್ತಾರರಾದ ಮೂಡಬಿದ್ರೆಯ ಧವಳ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ರವರು ಮಾತನಾಡಿ ಪಾದೂರರು ತಮ್ಮ ಅಲ್ಪಕಾಲಿಕ ಜೀವನದಲ್ಲಿ ಮಾಡಿದ ಸಾಧನೆಗಳನ್ನು ಕೇಳಿದರೆ ಇವರೊಬ್ಬರು ಕಾಲ್ಪನಿಕ ವ್ಯಕ್ತಿ ಆಗಿರಬಹುದೇನೋ ಎಂಬಂತೆ ಅನ್ನಿಸುತ್ತದೆ. ಸುಮಾರು ಎರಡು ಸಾವಿರ ಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ತಾವೇ ಸಂದರ್ಶಿಸಿ ನೂರಾರು ಶಾಸನಗಳನ್ನು ಅಧ್ಯಯನ ಮಾಡಿ ತುಳುನಾಡಿನ ಇತಿಹಾಸ ರಚನೆಗೆ ಭದ್ರ ಬುನಾದಿಯನ್ನು ಹಾಕಿದವರು ಪಾದೂರು ಭಟ್ಟರು. ತಮ್ಮ ಶಿಕ್ಷಣದ ವೆಚ್ಚವನ್ನೆಲ್ಲ ತಾವೇ ಭರಿಸಿ ಬಹು ಬಡತನದಿಂದ ಶಿಕ್ಷಣವನ್ನು ಪಡೆದು ಉನ್ನತ ಶಿಕ್ಷಣವನ್ನು ದೂರ ಶಿಕ್ಷಣದ ಮೂಲಕ ಪಡೆದು ಶಿಕ್ಷಕ ವೃತ್ತಿಗಳಿದರು. ಮೂಡುಬಿದರೆಯ ಶಾಲೆ ಒಂದರಲ್ಲಿ ಶಿಕ್ಷಕರಾದ ಇವರು ಅಲ್ಲಿಯ ಪರಿಸರ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಕಂಡು ಇತಿಹಾಸದ ಕುರಿತು ಒಲವನ್ನು ಬೆಳೆಸಿಕೊಂಡವರು. ಬಳಿಕ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿಯನ್ನು ಪಡೆದ ಪಾದೂರರು ಜನಮಾನಸದಲ್ಲಿ ಇತಿಹಾಸದ ಪ್ರಜ್ಞೆಯನ್ನು ಹುಟ್ಟಿಸುವಲ್ಲಿ ಮಾಡಿದ ಸಾಧನೆ ಅವಿಸ್ಮರಣೆಯ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿಯೂ ಬಳಿಕ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ ಇವರು ಇತಿಹಾಸ ಸಂಶೋಧನೆಯ ತುಡಿತದಿಂದ ಸ್ವಯಂ ನಿವೃತ್ತಿ ಪಡೆದು ಬಳಿಕ ಇತಿಹಾಸದ ಕಾರ್ಯವನ್ನೇ ಮುಂದುವರಿಸಿದರು. ತಮ್ಮ ಜೀವನವೇ ಇತಿಹಾಸ. ಇತಿಹಾಸ ಸಂಶೋಧನೆಯೇ ತಮ್ಮ ಉಸಿರೆಂದು ಭಾವಿಸಿ ಬಾಳಿದ ಇವರು ಕನ್ನಡದ ಮೊದಲ ತಾಮ್ರಪಟ ಶಾಸನ ಬೆಳ್ಮಣ್ಣಿನ ಶಾಸನ ಪತ್ತೆ ಹಚ್ಚಿ ಓದಿದ ಶ್ರೇಯಸ್ಸಲ್ಲದೆ ತುಳುನಾಡು ಮರೆಯಲಾಗದ ಹಲವಾರು ಕೊಡುಗೆಗಳನ್ನು ನೀಡಿದವರು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ರವರು ವಹಿಸಿದ್ದು ಪಾದೂರರ ಕುರಿತು ಹಾಗೂ ಅವರ ಜೀವನದ ಕುರಿತು ವಿದ್ಯಾರ್ಥಿಗಳಿಗೆ ಬೆಳಕು ಚೆಲ್ಲಿದರು. ಇತಿಹಾಸ ವಿಭಾಗದ ವರಿಷ್ಠ ರಾಗಿರುವ ಡಾ ಸನ್ಮತಿ ಕುಮಾರ್ ಹಾಗೂ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂತಿಮ ಬಿ.ಎ. ವಿದ್ಯಾರ್ಥಿನಿ ಶ್ರದ್ಧಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಮಾನಸಾ ಅತಿಥಿಯನ್ನು ಪರಿಚಯಿಸಿದರು. ಸೃಷ್ಟಿ ಸ್ವಾಗತಿಸಿ ವಿದ್ಯಾರ್ಥಿ ಪ್ರತಿನಿಧಿ ದುರ್ಗಾಪ್ರಸನ್ನ ವಂದನಾಪಣೆ ಗೈದರು. ಬಿ.ಎ. ಇತಿಹಾಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.