ಬೆಳ್ತಂಗಡಿ: ರಾಜ್ಯದ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರ್ಣಗೊಳಿಸಿದ್ದು, ಸರಕಾರ ಘೋಷಣೆ ಮಾಡಿರುವಂತಹ ಎಲ್ಲಾ ಘೋಷಣೆಗಳನ್ನು ಜನರಿಗೆ ತಲುಪಿಸುವ ಮೂಲಕ ನುಡಿದಂತೆ ನಡೆದ ಸರಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ. ಗ್ಯಾರಂಟಿಯ ಅನುದಾನದ ಮುಖಾಂತರ ಬೆಳ್ತಂಗಡಿ ತಾಲೂಕಿಗೆ 350 ಕೋಟಿ ಬಂದಿದೆ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಹಾಗೂ ಮುಂದಿನ ದಿನಗಳಲ್ಲಿ ಬರುವಂತಹ ಗ್ರಾಮ, ತಾಲೂಕು, ಜಿಲ್ಲಾ, ಪಟ್ಟಣ ಪಂಚಾಯತ್ ಚುನಾವಣೆಗಳ ವಿಚಾರಗಳನ್ನು ಇಟ್ಟುಕೊಂಡು ರಣಕಹಳೆ ಯನ್ನು ಮೊಳಗಿಸುವ ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸುವ, ತಾಲೂಕಿನ ಎಲ್ಲಾ ಗ್ರಾಮದ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಮುಖಾಂತರ ಮುಂದೆ ಬರುವಂತಹ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯದ ಉಪ ಮುಖ್ಯ ಮಂತ್ರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ಏ.20ರಂದು ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಸರಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶ ನಡೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದರು.

ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಏ.15 ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 10 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಿಕ್ಸೂಚಿ ಭಾಷಣವನ್ನು ನಿಕೇತ್ ರಾಜ್ ಮೌರ್ಯ ರವರು ಮಾಡಲಿರುವರು. ಕೃಷಿ ಸಚಿವ ಚೆಲುವರಾಯ ಸ್ವಾಮಿ, ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಎಂ.ಎಲ್.ಸಿ ಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಶಕುಂತಲಾ ಶೆಟ್ಟಿ, ಪುತ್ತೂರು ಶಾಸಕ ಅಶೋಕ್ ರೈ, ಉಡುಪಿಯ ನಾಯಕರುಗಳು ಹಾಗೂ ಪಕ್ಷದ ಇನ್ನಿತರ ನಾಯಕರುಗಳು ಭಾಗವಹಿಸಲಿವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್, ಹಕೀಮ್ ಕೊಕ್ಕಡ, ಲಕ್ಷ್ಮಣ ಗೌಡ, ಸೆಬಾಸ್ಟಿನ್, ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿದರು. ಪದ್ಮನಾಭ ಸಾಲ್ಯಾನ್ ವಂದಿಸಿದರು.