ಬೆಳ್ತಂಗಡಿ: ಉಜಿರೆ ಅನುಗ್ರಹ ಶಾಲೆಯಲ್ಲಿ ಸಿಸಿ ಕ್ಯಾಮರದ ಎನ್.ವಿ.ಆರ್ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಕರೆತಂದು ಮಹಜರು ನಡೆಸಿದ್ದಾರೆ.
ಉಜಿರೆ ಅನುಗ್ರಹ ಶಾಲೆಯಲ್ಲಿ ಮಾ.೩ರಂದು ರಾತ್ರಿ ಚೂಡಿದಾರ ಡ್ರೆಸ್ ಹಾಕಿಕೊಂಡು ನುಗ್ಗಿ ಸಿಸಿ ಕ್ಯಾಮರದ ಎನ್.ವಿ.ಆರ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.೪ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಉಜಿರೆ ಕಳ್ಳತನ ಪ್ರಕರಣದ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಳ್ಳತನ ಪ್ರಕರಣದಲ್ಲಿ ಕಾರು ಸಮೇತ ಪೊಲೀಸರ ಬಲೆಗೆ ಬಿದ್ದಿದ್ದರು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಜಿರೆ ಶಾಲೆಯ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಡುಪಿ ಜಿಲ್ಲೆಯ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿತ್ತು.
ಇಬ್ಬರು ಆರೋಪಿಗಳಾದ ಉಡುಪಿ ಜಿಲ್ಲೆಯ ನಾವೂಂದ ನಿವಾಸಿ ಗರುಡ ಗ್ಯಾಂಗ್ ಸದಸ್ಯ ರಿಝ್ವಾನ್ ಯಾನೆ ರಿಲ್ವಾನ್ (೨೪ವ) ಮತ್ತು ಉಡುಪಿ ಜಿಲ್ಲೆಯ ಬೈಂದೂರಿನ ಹರ್ಷಿತ್ ಯಾನೆ ಅವಿನಾಶ್ ದೊಂಡ್ರೆ (೨೫ವ) ಎಂಬವರನ್ನು ಉಡುಪಿಯ ಹಿರಿಯಡ್ಕ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ಪೊಲೀಸರು ಎ.೧೫ರಂದು ಬೆಳಗ್ಗೆ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡರು. ಬಳಿಕ ಉಜಿರೆ ಅನುಗ್ರಹ ಶಾಲೆಯಲ್ಲಿ ಬೆಳ್ತಂಗಡಿ ಸಬ್ ಇನ್ಸೆ÷್ಪಕ್ಟರ್ ಯಲ್ಲಪ್ಪ ನೇತೃತ್ವದ ಪೊಲೀಸರ ತಂಡ ಮಹಜರು ನಡೆಸಿ ವಾಪಸ್ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಬ್ಬರನ್ನು ಉಡುಪಿ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ.