ಬೆಳ್ತಂಗಡಿ : ಒಳ್ಳೆಯ ಚಟುವಟಿಕೆಗಳಿಂದ ಶಿಬಿರಾರ್ಥಿಗಳು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು. ವಿನೂತನ ರೀತಿಯ ಝೇಂಕಾರ ಬೇಸಿಗೆ ಶಿಬಿರದ ಚಟುವಟಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಕೀಲ,ಬಿಎಂಎಸ್ ಜಿಲ್ಲಾಧ್ಯಕ್ಷ ಯು ಅನಿಲ್ ಕುಮಾರ್ ಹೇಳಿದರು

ಅವರು ಬೆಳ್ತಂಗಡಿ ನಗರ ಪಂಚಾಯತ್ ಬಳಿಯ ಮಹಿಳಾ ವೃಂದದ ಸಭಾಂಗಣದಲ್ಲಿ ಎಂಟು ದಿನಗಳ ಕಾಲ ನಡೆಯುವ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಕನ್ನಡಮ್ಮ ವಾರಪತ್ರಿಕೆಯ ಸ್ಥಾನೀಯ ಸಂಪಾದಕರಾದ ಮಂಜುಳಾ ಡಿ ಪ್ರಸಾದ್ ರವರು ವಹಿಸಿ ಮಾತನಾಡಿ ತಾಲೂಕಿನ ವಿವಿಧ ಮೂಲೆಗಳಿಂದ ಆಗಮಿಸಿದ ಮಕ್ಕಳು ಒಂದೇ ಸೂರಿನಡಿ ಸೇರಿ ಆನಂದಿಸುವ ಈ ಬೇಸಿಗೆ ಶಿಬಿರವು ಮಕ್ಕಳ ಕ್ರಿಯಾಶೀಲ ಚಿಂತನೆಗೆ ಅಡಿಪಾಯವಾಗುವುದರೊಂದಿಗೆ ರಜಾ ಸಮಯವನ್ನು ಉತ್ತಮ ರೀತಿಯಲ್ಲಿ ಕಳೆಯಲು ಉತ್ತಮ ಅವಕಾಶ ಎಂದು ಹೇಳಿದರು.
ಬೆಳ್ತಂಗಡಿ ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಸುಭಾಷ್ ಚಂದ್ರರವರು ಝೇಂಕಾರ ಬೇಸಿಗೆ ಶಿಬಿರದ ಅಚ್ಚುಕಟ್ಟುತನವನ್ನು ಶ್ಲಾಘಿಸಿ ಶುಭ ಕೋರಿದರು.
ಶಿಬಿರದ ಸಂಯೋಜಕಿ ಹೇಮಾವತಿ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕುಮಾರಿ ನವ್ಯಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಹರಿಣಾಕ್ಷಿ ಕೆ ನಿರೂಪಿಸಿ ಧನ್ಯವಾದವಿತ್ತರು.ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿ ರಾಷ್ಟ್ರಮಟ್ಟದ ಕಲಾವಿದರಾದ ಸದಾಶಿವ ಶಿವಗಿರಿ ಕಲ್ಲಡ್ಕ ಶಿಬಿರದ ಚಟುವಟಿಕೆಗಳನ್ನು ನಡೆಸಿಕೊಟ್ಟರು.