

ಬೆಳ್ತಂಗಡಿ: ಬಜ್ಪೆಯ ಕಿನ್ನಿಪದವು ಎಂಬಲ್ಲಿ ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬವರನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆ ನಡೆಸಿರುವುದನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ನೀಡಿದ ಜಿಲ್ಲಾ ಬಂದ್ ಕರೆಯಂತೆ ಬೆಳ್ತಂಗಡಿ ತಾಲೂಕಿನ ಪೇಟೆಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‌ಗೊಳಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.



ಧರ್ಮಸ್ಥಳದಲ್ಲಿ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್
ಬೆಳಿಗ್ಗೆ ಉಜಿರೆ, ಧರ್ಮಸ್ಥಳ, ಗುರುವಾಯಕೆರೆ, ಮಡಂತ್ಯಾರು, ಶಿಶಿಲ ಸೇರಿದಂತೆ ಪ್ರಮುಖ ಪೇಟೆಗಳಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು. ಕೆಲವು ಕಡೆಗಳಲ್ಲಿ ಅಂಗಡಿ, ಮುಂಗಟ್ಟುಗಳು, ಹೋಟೆಲ್‌ಗಳು ತೆರೆದುಕೊಂಡಿದ್ದು, ಎಂದಿನಂತೆ ವ್ಯಾಪಾರ ನಡೆಸಿದ್ದವು.

ಸುಮಾರು 11 ಗಂಟೆಯ ನಂತರ ಎಲ್ಲಾ ಅಂಗಡಿ-ಹೋಟೆಲ್‌ಗಳು ಬಂದ್ ಆಗಿವೆ. ಅದುವರೆಗೆ ಒಂದೋದು ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ಸಂಚರಿಸುತ್ತಿದ್ದು, ಅದು ಸಹ ಸಂಚಾರವನ್ನು ಸ್ಥಗಿತಗೊಳಿಸಿವೆ. ಬೆಳಿಗ್ಗೆ ಜೈನಪೇಟೆ ಸಮೀಪ ಖಾಸಗಿ ಬಸ್‌ವೊಂದಕ್ಕೆ ಕಿಡಿಗೇಡಿಗಳು ಕಲ್ಲು ಹೊಡೆದ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 6 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಬೆಳ್ತಂಗಡಿಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಭಾರತೀಯ ಜನತಾ ಪಾರ್ಟಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಬಂದ್ ಕರೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬೆಳಿಗ್ಗೆ ಬಸ್‌ಗಳಿಲ್ಲದೆ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಪರದಾಟ ನಡೆಸಬೇಕಾಯಿತು. ಕೆಲವೊಂದು ಶಾಲೆಗಳಿಗೆ ಮಕ್ಕಳು ಬಂದು ಹಿಂತಿರುಗಿ ಮನೆಗೆ ಹೋಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಯ ಪೊಲೀಸರು ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.