ಬೆಳ್ತಂಗಡಿ: ಬಂದಾರು ಗ್ರಾಮದ ಮದುವೆ ಮನೆಯೊಂದರ ಆರತಕ್ಷತೆ ಊಟ ಸೇವಿಸಿ ವಾಂತಿ ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಬಂದಾರು ಗ್ರಾಮದಲ್ಲಿ ಮೇ 12 ರಂದು ನಡೆದ ಆರತಕ್ಷತೆ ಊಟ ಮಾಡಿದ ಬಹುತೇಕ ಮಂದಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು 60 ವರ್ಷ ಮೇಲ್ಪಟ್ಟ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ 5 ಮಂದಿಯ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ಸಮಾರಂಭಕ್ಕೆ ಆಗಮಿಸಿದ ವ್ಯಕ್ತಿಗಳು ವಾಂತಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎನ್ನಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಾರಿನ ಸುಮಾರು 40 ಹೆಚ್ಚು ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಅರತಕ್ಷತೆಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭೋಜನ ಸೇವಿಸಿದ ಮಂದಿ ಅಸ್ವಸ್ಥರಾಗುತ್ತಿದ್ದು ಘಟನೆಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ. ವಧು ವರರನ್ನು ಆಶೀರ್ವಾದಿಸಲು ಬಂದವರಿಗೆ ಈ ರೀತಿ ನಡೆಯಿತಲ್ಲ ಎಂದು ಮದುವೆ ಮನೆಯವರು ದುಃಖ ಪಡುತ್ತಿದ್ದಾರೆ ಎನ್ನಲಾಗಿದೆ.