23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಂತರರಾಷ್ಟ್ರೀಯ ‘ಗ್ರೀನ್‌ ಆಸ್ಕರ್‌’ ಸೆಲ್ಕೋ ಮಡಿಲಿಗೆ ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಂದ ದೊಡ್ಡ ಗೌರವ; ಗ್ರಾಮೀಣ ನಾವೀನ್ಯತೆಗಾಗಿ ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ಗೆ ಆಶ್ಡೆನ್ ಪ್ರಶಸ್ತಿ –2025

ಬೆಳ್ತಂಗಡಿ: ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿಯ ಗೌರವ ಸಂದಿದೆ. ಗ್ರೀನ್‌ ಆಸ್ಕರ್‌ ಎಂಬ ಹೆಗ್ಗಳಿಕೆ ಹೊಂದಿರುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಮೂರನೇ ಬಾರಿ ಮುಡಿಗೇರಿಸಿಕೊಂಡ ಗೌರವ ಸೆಲ್ಕೋ ಸಂಸ್ಥೆಗೆ ಸಲ್ಲುತ್ತಿದೆ. ಇದು 25ನೇ ಆಶ್ಡೆನ್‌ ಪ್ರಶಸ್ತಿಯಾಗಿದ್ದು, ಜೂನ್‌ 11ರಂದು ಲಂಡನ್‌ನ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲಿಂಕ್ಡ್‌ ಇನ್‌ ಎಂಟರ್‌ಪ್ರೈಸ್ ಅಕೌಂಟ್‌ ಡೈರೆಕ್ಟರ್‌ ಮತ್ತು ಗೋ ಗ್ರೀನ್‌ ಲೀಡ್‌ನ ಮುಖ್ಯಸ್ಥರಾದ ಕ್ರಿಸ್‌ ಬೆನೆಟ್‌ ಈ ಪ್ರಶಸ್ತಿಯನ್ನು ಸೆಲ್ಕೋ ಸಿಇಒ ಮೋಹನ ಹೆಗಡೆ ಮತ್ತು ಡಿಜಿಎಂ ಸುದೀಪ್ತ ಘೋಷ್‌ ಅವರಿಗೆ ಪ್ರದಾನ ಮಾಡಿದರು. ಗೋ ಗ್ರೀನ್‌ ಇಂಗ್ಲೆಂಡ್‌ನ ಹವಾಮಾನ ರಾಯಭಾರಿ ರಾಚೆಲ್ ಕೈಟ್ ಮತ್ತು ಉಗಾಂಡಾದ ಪರಿಸರವಾದಿ ವನೆಸ್ಸಾ ನಕೇಟ್, ಸೆಲ್ಕೋ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು. 2005 ಮತ್ತು 2007ರಲ್ಲಿಯೂ ಸೆಲ್ಕೋ ಸಂಸ್ಥೆಗೆ ಆಶ್ಡೆನ್‌ ಪ್ರಶಸ್ತಿ ಲಭಿಸಿದ್ದು, 25ನೇ ವರ್ಷದ ಗೌರವವನ್ನೂ ಮುಡಿಗೇರಿಸಿಕೊಂಡ ಸೆಲ್ಕೋ ಸಾಧನೆಯಿಂದಾಗಿ ಭಾರತದ ಪರಿಸರ ಕ್ಷೇತ್ರವೇ ಹೆಮ್ಮೆ ಪಡುವಂತಾಗಿದೆ.

ಸೆಲ್ಕೋ : ಸಾಧನೆಯ ಸುದೀರ್ಘ ಹಾದಿ
1995 ರಲ್ಲಿ ಡಾ. ಹರೀಶ್ ಹಂದೆ ಮತ್ತು ನೆವಿಲ್ಲೆ ವಿಲಿಯಮ್ಸ್ ಅವರು ಸ್ಥಾಪಿಸಿದ ಸೆಲ್ಕೋ ಸಂಸ್ಥೆ ಕರ್ನಾಟಕದ ಮನೆಗಳಿಗೆ ಸೌರಬೆಳಕು ಕೈಗೆಟುಕುವಂತೆ ಮಾಡುತ್ತ ಇಂದು, ದೇಶದ ಪ್ರಮುಖ ಸಾಮಾಜಿಕ ಉದ್ಯಮವಾಗಿ ಬೆಳೆದಿದೆ. ಆಂಧ್ರಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಸಾಮಾನ್ಯರಿಗೆ ಹಸಿರು ಇಂಧನವು ಲಭ್ಯವಾಗುವಂತೆ ಮಾಡುವಲ್ಲಿ ಅಹರ್ನಿಶಿ ಶ್ರಮಿಸುತ್ತಿದೆ. ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿಯೂ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಸೆಲ್ಕೋ ಆರು ಲಕ್ಷಕ್ಕೂ ಹೆಚ್ಚು ಸೌರ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಎಂಭತ್ತು ಲಕ್ಷಕ್ಕೂ ಹೆಚ್ಚು ಸೌರ ವಿದ್ಯುತ್‌ ಪರಿಣಾಮಗಳು(impact) ಜನರಿಗೆ ಲಭ್ಯವಾಗುವಂತೆ ಮಾಡಿದೆ. 24,000 ಕ್ಕೂ ಹೆಚ್ಚು ಸೌರ-ಜೀವನೋಪಾಯ ವ್ಯವಸ್ಥೆಗಳು ಗ್ರಾಮೀಣ ಜನರಿಗೆ ದೊರೆತಿದೆ. ಐದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೌರಶಕ್ತಿ ಚಾಲಿತ ಡಿಜಿಟಲ್ ತರಗತಿ ಕೊಠಡಿಗಳನ್ನು ರೂಪಿಸಿದೆ. 60 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೌರವಿದ್ಯುತ್‌ ಅಳವಡಿಸಲಾಗಿದೆ.

ಸೆಲ್ಕೋ ಸಿಇಒ ಮೋಹನ ಭಾಸ್ಕರ ಹೆಗಡೆ ನುಡಿಗಳು:
‘‘ಬಡತನದ ಸವಾಲು ಎದುರಿಸುವಲ್ಲಿ ಹಾಗೂ ಸಹಜ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಪರ್ಯಾಯ ಇಂಧನ ಶಕ್ತಿ ಬಳಕೆ ಪ್ರಗತಿಪಥದಲ್ಲಿದೆ. ಇದರಿಂದ ಅಭಿವೃದ್ಧಿ ಹಾಗೂ ನಿಜವಾದ ಭರವಸೆ ಹೆಚ್ಚುತ್ತದೆ. ಪರಂಪರೆಯ ಸಹಜ ಹರಿವಿನಿಂದ ವ್ಯಕ್ತಿಯ ನೈಸರ್ಗಿಕ ಬುದ್ಧಿಮತ್ತೆ ಸಂರಕ್ಷಣೆ – ಹಾಗೂ ಕೌಶಲ್ಯಾದಾರಿತ ಸಾಮಾಜಿಕ ಉದ್ಯಮ ಬೆಳವಣಿಗೆ ಸಾಧ್ಯ. ಮುಂದಿನ ಜನಾಂಗ ಇದನ್ನು ನೆನಪಿಸಿಕೊಳ್ಳುತ್ತದೆ. ಸುಸ್ಥಿರ ಸಮಾಜ ಇದರಿಂದ ನಿರ್ಮಾಣವಾಗುವುದು. ನಮ್ಮ ಸಂಸ್ಥೆಗೆ ಬಂದ ಈ ಪ್ರಶಸ್ತಿಯ ಗೌರವ ನಮ್ಮ ಆಡಳಿತ ಮಂಡಳಿ, ಡಿಜಿಎಂ ಗಳಾದ ಗುರುಪ್ರಕಾಶ್ ಶೆಟ್ಟಿ, ಪ್ರಸನ್ನ ಹೆಗಡೆ, ಸುದೀಪ್ ಘೋಷ್ ಹಾಗೂ ನಮ್ಮೆಲ್ಲಾ ಸಹೋದ್ಯೋಗಿಗಳ ಹಾಗೂ ನಮ್ಮೊಡನೆ ವ್ಯವಹರಿಸುವ ಎಲ್ಲಾ ಆರ್ಥಿಕ, ಸಾಮಾಜಿಕ ಹಾಗೂ ವ್ಯಾವಹಾರಿಕ ಬಂಧುಗಳಿಗೆ, ಮಾರ್ಗದರ್ಶನ ಮಾಡಿದ ಆಡಳಿತ ಮಂಡಳಿಗೆ ಸಲ್ಲುತ್ತದೆ’’ ಎಂದರು. ಸೌರ ವಿದ್ಯುತ್‌ ಬಳಕೆ, ಪ್ರಯೋಗ ಮತ್ತು ಪ್ರಚಾರದಲ್ಲಿ ರಾಜ್ಯಸರ್ಕಾರ ಮತ್ತು ಕೇಂದ್ರ ಸರ್ಕಾರದ ನೆರವು ಮತ್ತು ಬೆಂಬಲವನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿಕೊಂಡಿದ್ದಾರೆ.

ಪ್ರಶಸ್ತಿಯ ಕುರಿತು ಮಾತನಾಡಿದ ಆಶ್ಡೆನ್‌ ಸಿಇಒ ಡಾ. ಅಶೋಕ್ ಸಿನ್ಹಾ, “2025 ರ ಆಶ್ಡೆನ್ ಪ್ರಶಸ್ತಿ ವಿಜೇತರು ನಮ್ಮನ್ನೆಲ್ಲ ಆಶಾದಾಯಕವಾದ ಉತ್ತಮ ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ. ಸೆಲ್ಕೋ ಮೂಲಕ ರೂಪುಗೊಂಡ ಪರಿಹಾರೋಪಾಯಗಳು ಅಗಾಧವಾಗಿ ಪರಿಣಾಮ ಬೀರಬಲ್ಲವು ಎಂಬುದು ಸಾಬೀತಾಗಿದೆ’’ ಎಂದರು.

Related posts

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 46ನೇ ವರ್ಷದ ಭಜನಾ ಸಪ್ತಾಹ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ್ ದಿವಸ ಆಚರಣೆ

Suddi Udaya

ಕಳಿಯ: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ

Suddi Udaya
error: Content is protected !!