ಬೆಳ್ತಂಗಡಿ: ರಸ್ತೆಗಳಲ್ಲಿ ಮತ್ತು ಕಾಲುವೆಗಳಲ್ಲಿಯ ಪ್ಲಾಸ್ಟಿಕ್ ಕಸದ ರಾಶಿಗಳು, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಪರಿಸರ ಹಾಗೂ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸಿಎಂ, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ ೫ ರ ಅಡಿಯಲ್ಲಿ ಹಾಗೂ Plastic Waste Management Rules, 2016 (Amended in 2021) ಅನ್ವಯ ಕ್ಯಾರಿ ಬ್ಯಾಗ್ ಇತ್ಯಾದಿಗಳಲ್ಲಿ ೧೨೦ ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಎಲ್ಲಾ ಕೆಲವು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣಾ ಹಾಗೂ ಬಳಕೆ ನಿಷೇಧಿಸಲಾಗಿದೆ. ಈ ನಿಯಮಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಾಗಿದೆ.
ರಸ್ತೆಗಳಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿಯಾದರೆ ಬೀಳುತ್ತೆ ದಂಡ:
ಸ್ಥಳೀಯ ಸಂಸ್ಥೆಗಳ ಬಿಬಿಎಂಪಿ, ನಗರ ಪಾಲಿಕೆಗಳು, ಪುರಸಭೆಗಳು, ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯತ್ ಮೂಲಕ ರಸ್ತೆ ಮತ್ತು ಕಾಲುವೆಗಳಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿ ಹಾಗೂ ದಂಡ ವಿಧಿಸುವ ಕಾರ್ಯಾಚರಣೆ ತ್ವರಿತವಾಗಿ ಜಾರಿಗೆ ತರಬೇಕು. ಏಕ ಬಳಕೆಯ ಪ್ಲಾಸ್ಟಿಕ್ ತಯಾರಕರು ಹಾಗೂ ಮಾರಾಟದ ಮೇಲ್ವಿಚಾರಣೆಗೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧೀನ ಇಲಾಖೆಗಳಿಗೆ ಸೂಚನೆ ನೀಡಬೇಕು. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಮತ್ತು ಮಾಧ್ಯಮದ ಜತೆಗೂಡಿ ಅಭಿಯಾನ ಕೈಗೊಳ್ಳಬೇಕು. ತಮ್ಮ ಇಲಾಖೆಯ ವ್ಯಾಪ್ತಿಯ ಎಲ್ಲಾ ಕಚೇರಿಗಳು ಮತ್ತು ಘಟಕಗಳಲ್ಲಿ ಏಕ ಬಳಕೆಯ. ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣದಿಂದಲೇ ನಿಷೇಧಿಸುವಂತೆ ಕ್ರಮ ಕೈಗೊಳ್ಳುವುದು. ಈ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಕ್ರಮಗಳ ವರದಿಯನ್ನು 15 ದಿನಗಳೊಳಗೆ ಈ ಕಛೇರಿಗೆ ಸಲ್ಲಿಸುವಂತೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.











