37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಅಗ್ರಿಲೀಫ್ ಸಂಸ್ಥೆಯಲ್ಲಿ ಐಡಿಯಾಥಾನ್ ವಾರಾಚರಣೆ

ನಿಡ್ಲೆ: ಜೂನ್ 16 ರಿಂದ 21ರವರೆಗೆ ಅಗ್ರಿಲೀಫ್ ಸಂಸ್ಥೆಯಲ್ಲಿ ಐಡಿಯಾಥಾನ್ ವಾರಾಚರಣೆ ನಡೆಯಿತು. ಜೂನ್ 16ರಂದು ಉದ್ಘಾಟನೆಗೊಂಡು ಒಂದು ವಾರ ನಡೆದ ಈ ಹಬ್ಬದಲ್ಲಿ ಸಂಸ್ಥೆಯ ಎಲ್ಲ ಉದ್ಯೋಗಿಗಳು ಪಾಲ್ಗೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಐಡಿಯಾಗಳನ್ನು ನಿಗದಿತ ಬಾಕ್ಸ್ ನಲ್ಲಿ ಹಾಕಿ, ಬಹುಮಾನ ಗೆಲ್ಲುವ ವಿಶೇಷ ಅವಕಾಶವನ್ನು ಅಗ್ರಿಲೀಫ್ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಕಲ್ಪಿಸಿಕೊಟ್ಟಿತ್ತು. ಒಂದು ವಾರದಾದ್ಯಂತ ನಡೆದ ಈ ಹಬ್ಬದಲ್ಲಿ ಮುಖ್ಯ ಅತಿಥಿಗಳಾಗಿ ನಿಡ್ಲೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ, ನಿಡ್ಲೆ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಆಗಮಿಸಿ ಉತ್ತಮ ಐಡಿಯಾ ನೀಡಿದ ಉದ್ಯೋಗಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಕಾರ್ಯಸಾಧ್ಯತೆ, ಕ್ರಿಯಾಶೀಲತೆ, ಪ್ರಭಾವ, ಸ್ಪಷ್ಟತೆ, ಪ್ರಸ್ತುತತೆ ಇವುಗಳ ಆಧಾರದಲ್ಲಿ ಮೌಲ್ಯಮಾಪನ ನಡೆದು ದಿನಕ್ಕೆ 5ರಿಂದ 7ರಂತೆ ವಿಶೇಷ ನಗದು ಬಹುಮಾನಗಳನ್ನು ಉದ್ಯೋಗಿಗಳು ಗಿಟ್ಟಿಸಿಕೊಂಡರು. ಜೂನ್ 21ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯೋಗಿಗಳು ವಾರದ ವಿಶೇಷ ಐಡಿಯಾಗಳಿಗಾಗಿ ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಅದೇ ದಿನ ಉದ್ಯೋಗಿಗಳ ಸಾಧನೆಗಳನ್ನು ಗುರುತಿಸುವ ಸಲುವಾಗಿ ತ್ರೈಮಾಸಿಕ ಪ್ರಶಸ್ತಿ ವಿತರಣಾ ಸಮಾರಂಭ, ಝೋಮ್ಯಾಟೋ ನಡೆಸಿದ ರಾಷ್ಟ್ರಮಟ್ಟದ ಪ್ಲಾಸ್ಟಿಕ್ ಮುಕ್ತ ಫ್ಯೂಚರ್ ಪ್ಯಾಕಥಾನ್ ಸ್ಪರ್ಧೆಯಲ್ಲಿ 10 ಲಕ್ಷ ರೂಪಾಯಿಗಳನ್ನೂ ಗೆದ್ದಿರುವ ಸಂಭ್ರಮಾಚರಣೆ ಹಾಗೂ ರೈತರಿಂದ ಈ ವರ್ಷ ಅತಿ ಹೆಚ್ಚು ಹಾಳೆಗಳನ್ನು ಸಂಗ್ರಹಿಸಿದ ಉದ್ಯೋಗಿಗಳಿಗೆ ನಗದುಪುರಸ್ಕಾರದ ಸಮಾರಂಭವನ್ನೂ ಅಗ್ರಿಲೀಫ್ ಹಮ್ಮಿಕೊಂಡಿತ್ತು.

ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆನಕ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಅವರು ಆಗಮಿಸಿದ್ದರು. ನಿಡ್ಲೆಯಂತಹ ಹಳ್ಳಿ ಇಂದು ದೇಶದಲ್ಲೆಲ್ಲ ಪ್ರಸಿದ್ದಿ ಪಡೆದಿರಲು ಮುಖ್ಯ ಕಾರಣ ಅಗ್ರಿಲೀಫ್ ಸಂಸ್ಥೆ. 2-3 ಜನರಿಂದ ಆರಂಭವಾದ ಸಂಸ್ಥೆ ಇಂದು 300 ಉದ್ಯೋಗಿಗಳನ್ನು ಹೊಂದಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಉಲ್ಲೇಖನೀಯ. ಐಡಿಯಾಥಾನ್ ನಲ್ಲಿ ಉದ್ಯೋಗಿಗಳೆಲ್ಲ ಮುಕ್ತವಾಗಿ ಭಾಗವಹಿಸಿ ತಮ್ಮ ಕಾರ್ಯಕ್ಷೇತ್ರದ ಕುರಿತು 300ಕ್ಕೂ ಹೆಚ್ಚು ಐಡಿಯಾಗಳನ್ನು ನೀಡಿದ್ದು , ಅವು ಅನುಷ್ಠಾನಗೊಂಡು ಸಂಸ್ಥೆ ಇನ್ನಷ್ಟು ಔನತ್ತ್ಯಕ್ಕೆ ಏರಲಿ ಎಂದು ಹಾರೈಸಿ , ತಮ್ಮ ಸಂಸ್ಥೆಯಲ್ಲೂ ಅಳವಡಿಸಲು ಇದು ಪ್ರೇರೇಪಕ ಎಂದು ನುಡಿದರು.

ಸಾಧನೆಗೈದ ಉದ್ಯೋಗಿಗಳನ್ನು ಸನ್ಮಾನಿಸಿ ಪ್ರಶಂಸಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಂಸ್ಥೆಯ ಉದ್ಯೋಗಿಗಳಾದ ಕು. ಸಹನಾ ಬಿ ಶೆಟ್ಟಿ, ಶ್ಯಾಮಾನಂದನ ಹಿಳ್ಳೆಮನೆ ಮತ್ತೆ ಶ್ರೀನಾಥ್ ಅಭ್ಯಂಕರ್ ಅವರು ನಡೆಸಿಕೊಟ್ಟರು. ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಘ್ನೇಶ್ ಸ್ವಾಗತಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ರಾವ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಝೋಮ್ಯಾಟೋ ದಂತಹ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ನಡೆಸಿದ ಪ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ 21 ರಾಜ್ಯಗಳ 128 ಕಂಪೆನಿಗಳಲ್ಲಿ ಅಗ್ರಿಲೀಫ್ ಪ್ರಥಮ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕುರಿತು ಉಲ್ಲೇಖಿಸಿದರು. ಈ ಸಾಧನೆಯ ಹಿಂದೆ ಪ್ರೇರಣಾ ಶಕ್ತಿಯಾಗಿ, ಎಲ್ಲ ಕಷ್ಟಕರ ಸನ್ನಿವೇಶಗಳಲ್ಲಿ ತನ್ನೊಡನೆ ಗಟ್ಟಿಯಾಗಿ ನಿಂತ ಅಗ್ರಿಲೀಫ್ ಕುಟುಂಬದ ಎಲ್ಲ ಉದ್ಯೋಗಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಹ ಸಂಸ್ಥಾಪಕ ಅತಿಶಯ ಜೈನ್ ಧನ್ಯವಾದ ಸಮರ್ಪಿಸಿದರು. ಚೀಫ್ ಆಫ್ ಸ್ಟಾಫ್ ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಮುಂಡಾಜೆ: ಗುಡ್ಡಕ್ಕೆ ಬೆಂಕಿ

Suddi Udaya

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ: ದೇವರ ದರ್ಶನ ಬಲಿ, ಪಲ್ಲ ಪೂಜೆ

Suddi Udaya

ಪುಂಜಾಲಕಟ್ಟೆ: ‘ಸ್ವಾಸ್ತ್ಯ ಸಂಕಲ್ಪ’ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Suddi Udaya
error: Content is protected !!