ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ 2024-2025ನೇ ಸಾಲಿನಲ್ಲಿ ರೂ.29.79 ಲಕ್ಷ ನಿವ್ವಳ ಲಾಭ ಗಳಿಸಿರುತ್ತಿದ್ದು ಸದಸ್ಯರಿಗೆ ಶೇ.10 ಪಾಲು ಮುನಾಫೆ (ಡಿವಿಡೆಂಡ್) ಘೋಷಿಸಲಾಗಿದೆ. 2024-25 ಸಾಲಿನಲ್ಲಿ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ. 1 ರಂತೆ ಗರಿಷ್ಠ ರೂ.5 ಸಾವಿರ ಮಿತಿಗೊಳಪಟ್ಟು ಖರೀದಿ ಬೋನಸ್ ನೀಡುವುದಾಗಿ ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು.

ಅವರು ಜು.19ರಂದು ಉಜಿರೆ ಶ್ರೀ ಕೃಷ್ಣಾನುಗ್ರಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಾಧನೆಗಳ ವಿವರ ನೀಡಿ, ೧೯೮೫ ರಲ್ಲಿ ದಿ. ಜಿ. ಎನ್. ಭಿಡೆಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಈ ಸಹಕಾರಿ ಸಂಘವು ತನ್ನ ವಿಶಿಷ್ಟ ಸಾಧನೆಯ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಹೆಸರು ಗಳಿಸಿ, ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದು ಎಂದು ಪ್ರಖ್ಯಾತಿಯನ್ನು ಗಳಿಸಿದೆ.
ಸಂಘದಲ್ಲಿ 3,0828 ಮಂದಿ ಸದಸ್ಯರಿದ್ದು, 129ಲಕ್ಷ ಪಾಲುಬಂಡವಾಳ, 26.28 ಕೋಟಿ ಠೇವಣಾತಿ ಇದೆ. ಸಂಘದಲ್ಲಿ 54.87 ಲಕ್ಷ ಹೊರ ಬಾಕಿ ಸಾಲವಿದ್ದು, ಸರಕಾರಕ್ಕೆ ರೂ.17.19 ಕೋಟಿ ಜಿಎಸ್.ಟಿ ಕಟ್ಟಲಾಗಿದೆ. ಸಂಘದಲ್ಲಿ ರಬ್ಬರ್ 16687 ಟನ್, ಇತರ ಮಾರಾಟ ವ್ಯವಹಾರ 318.80 ಕೋಟಿ, ಸಂಸ್ಕರಣ ಘಟಕ 1.14 ಕೋಟಿ, ಲ್ಯಾಟೆಕ್ಸ್ ವ್ಯವಹಾರ ೩.೩೮ ಕೋಟಿ ಸೇರಿದಂತೆ ಒಟ್ಟು ೩೨೩.೩೭ ಮಾರಾಟ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.
33 ಕಡೆ ಸಂಘದ ಖರೀದಿ ಕೇಂದ್ರ:
ಸಂಘವು ಗುರುವಾಯನಕೆರೆ, ಹೆಬ್ರಿ, ಅಳದಂಗಡಿ, ಗಂಡಿಬಾಗಿಲು, ತೋಟತ್ತಾಡಿ, ಅರಸಿನಮಕ್ಕಿ, ಶಿಬಾಜೆ, ಮುಂಡುಪ್ಪಾಡಿ, ಕಾಯರ್ತಡ್ಕ, ಅಣಿಯೂರು, ಕಕ್ಕಿಂಜೆ, ಇಂದಬೆಟ್ಟು. ಕಡಿರುದ್ಯಾವರ, ಸಾಗರ, ನರಸಿಂಹರಾಜಪುರ, ಜಡ್ಕಲ್, ಹೊಸ್ಮಾರು, ಕಾರ್ಕಳ, ಉಪ್ಪಿನಂಗಡಿ, ಮೂರ್ಜೆ, ಕಾವು, ವಿಟ್ಲ, ತೀರ್ಥಹಳ್ಳಿ, ಪಡಂಗಡಿ, ಸಿದ್ದ ಕಟ್ಟೆ, ಬೆಳಾಲು, ಶಿರ್ತಾಡಿ, ಮುಂಡಾಜೆ, ಈಶ್ವರಮಂಗಲ, ನಿಷ್ಠೆ, ಪಾಣಾಜಿ, ಕೊಕ್ಕಡ, ಅಜೆಕಾರು ಸೇರಿ ಒಟ್ಟು ೩೩ ಕಡೆಗಳಲ್ಲಿ ಖರೀದಿ ಕೇಂದ್ರ ಹೊಂದಿದೆ.
ಸಂಸ್ಕರಣ ಘಟಕದಲ್ಲಿ ರೂ.1.14 ಕೋಟಿ ವ್ಯವಹಾರ:
ಸಂಘದಿಂದ ನಡೆಸಲ್ಪಡುವ ಉತ್ಪಾದನಾ ಘಟಕದಲ್ಲಿ ವಾಹನದ ಬಿಡಿ ಭಾಗ, ದ್ವಿಚಕ್ರ ವಾಹನಗಳ ಫೂಟ್ ಮ್ಯಾಟ್, ಪಂಪ್‌ಸೆಟ್ ಬಿಡಿ ಭಾಗ, ಕೈಗಾರಿಕಾ ವಸ್ತುಗಳು, ಮಡ್ ಗಾರ್ಡ್ ಪ್ಲಾಪ್, ಟಯರ್ ಪ್ಲಾಪ್ ಅಲ್ಲದೆ ಕೆಲವು ಕೈಗಾರಿಕೆಗೆ ಬೇಕಾದ ರಬ್ಬರು ಬಿಡಿಭಾಗಗಳ ಉತ್ಪಾದನೆಯೊಂದಿಗೆ ವರದಿ ಸಾಲಿನಲ್ಲಿ ಒಟ್ಟು ರೂ.1.14 ಕೋಟಿ ಮಾರಾಟ ಉತ್ಪಾದನಾ ಘಟಕದಲ್ಲಿ ಸಾಧಿಸಲಾಗಿದೆ. ಘಟಕದಲ್ಲಿ ಮುಖ್ಯವಾಗಿ ವಿಎಸ್‌ಟಿ ಟಿಲ್ಲರ್‌ನ ಬಿಡಿಭಾಗ ಮತ್ತು ಕೇಜ್ ಮ್ಯಾಟ್ (ಕೋಳಿಫಾರಂಗಳಲ್ಲಿ ಬಳಸುವ ಮ್ಯಾಟ್) ಉತ್ಪಾದನೆ ಮಾಡುತ್ತಿದ್ದು ಉತ್ತಮ ಬೇಡಿಕೆ ಎಂದು ತಿಳಿಸಿದರು.
ರಬ್ಬರು ನರ್ಸರಿ ಹಾಗೂ ಹಾಲು ಖರೀದಿ:
ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಸಂಘವು ಸ್ವಂತ ಜಾಗ ಖರೀದಿಸಿ ನರ್ಸರಿ ಸ್ಥಾಪಿಸಿದ್ದು ವರದಿ ಸಾಲಿನಲ್ಲಿ ಒಟ್ಟು ೪೦೧೨ ಹೊಟ್ಟೆ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ರಬ್ಬರು ಧಾರಣೆಯು ಕಡಿಮೆ ಇರುವುದರಿಂದ ಬೆಳೆಗಾರರು ಹೊಸದಾಗಿ ರಬ್ಬರು ಕೃಷಿಗೆ ಆಸಕ್ತಿ ತೋರಿಸದಿರುವ ಕಾರಣ ನರ್ಸರಿ ನಷ್ಟದಲ್ಲಿರುತ್ತದೆ. ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರು ಹಾಲು (ಲ್ಯಾಟೆಕ್ಸ್) ಖರೀದಿಯನ್ನು ಪ್ರಾರಂಭಿಸಿರುತ್ತಿದ್ದು ವರದಿ ಸಾಲಿನಲ್ಲಿ ಒಟ್ಟು ರೂ.3.38 ಕೋಟಿ ಮೌಲ್ಯದ ಲ್ಯಾಟೆಕ್ಸ್ ಮಾರಾಟ ಮಾಡಲಾಗಿರುತ್ತದೆ ಎಂದು ಅಧ್ಯಕ್ಷ ಶ್ರೀಧರ ಭಿಡೆಯವರು ಮಾಹಿತಿ ನೀಡಿದರು.
ಸಂಘದ ವಿಶೇಷ ಸಾಧನೆ:
ಸದಸ್ಯರ ಉತ್ಪನ್ನಗಳಿಗೆ ಅತ್ಯಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ಸದಸ್ಯರನ್ನು ಅಂತರರಾಷ್ಟ್ರೀಯವಾಗಿ ಅತ್ಯುತ್ತಮ ದರ್ಜೆಯ ರಬ್ಬರಾದ RSS-IX ರಬ್ಬರ್ ತಯಾರಿಸಲು ಪ್ರೋತ್ಸಾಹಿಸಿ ಮಾರುಕಟ್ಟೆ ಒದಗಿಸಲಾಗಿದೆ. ವರದಿ ಸಾಲಿನಲ್ಲಿ ರಬ್ಬರಿಗೆ ಒಟ್ಟು 294 ಟನ್ RSS-IX ರಬ್ಬರ್ ಉತ್ಪಾದನೆಯಾಗಿದೆ. ಈ ದರ್ಜೆಯ ಧಾರಣೆಗಿಂತ ಕನಿಷ್ಟ ರೂ. 10 ರಿಂದ ರೂ.25 ರವರೆಗೆ ಅಧಿಕ ಧಾರಣೆಯು ಬೆಳೆಗಾರರಿಗೆ ದೊರಕಿರುತ್ತದೆ. ಸಂಘದ ಸದಸ್ಯರು ಬೆಳೆಸಿದ ಕಾಳುಮೆಣಸು ಖರೀದಿ ವ್ಯವಹಾರವನ್ನು ಪ್ರಾರಂಭಿಸಿದ್ದು, ವರದಿ ಸಾಲಿನಲ್ಲಿ ಒಟ್ಟು 36.66ಲಕ್ಷ ಮೌಲ್ಯದ 5949.700ಕೆಜಿ ಕಾಳುಮೆಣಸು ಖರೀದಿ ಮಾಡಲಾಗಿದೆ. ಸಂಘದಲ್ಲಿ ದಾಸ್ತಾನು ಇಡುವ ಸೌಲಭ್ಯ ನೀಡಿದ್ದು, ವರದಿ ಸಾಲಿನಲ್ಲಿ ಸುಮಾರು ೯೭೫ಟನ್ ರಬ್ಬರ್ ಸಂಘದಲ್ಲಿ ದಾಸ್ತಾನು ಇಡಲಾಗಿದ್ದು ಸುಮಾರು ೨೫೦ಕ್ಕೂ ಮೇಲ್ಪಟ್ಟು ಸದಸ್ಯರು ಇದರ ಪ್ರಯೋಜನ ಪಡಕೊಂಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು.
ಇದಲ್ಲದೆ ಬೆಳೆಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ಕ್ಲಪ್ತ ಸಮಯದಲ್ಲಿ ರಸಗೊಬ್ಬರ ಒದಗಿಸಲಾಗುತ್ತಿದ್ದು, ವರದಿ ಸಾಲಿನಲ್ಲಿ 607 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ.ನೈಜ ರಬ್ಬರನ್ನು ಮುಖ್ಯವಾಗಿ ರಾಷ್ಟ್ರದ ಪ್ರತಿಷ್ಠಿತ ಟಯರ್ ಕಂಪೆನಿಗಳಾದ MRF, Apollo ಮತ್ತು TVS Tyre Co. ಅಲ್ಲದೆ ದೇಶದ ಮೂಲೆ ಮೂಲೆಯ ಸುಮಾರು 150 ಕ್ಕೂ ಮೇಲ್ಪಟ್ಟು ಉತ್ಪಾದಕ ಕಂಪೆನಿಗಳೊಂದಿಗೆ ವ್ಯವಹರಿಸಲಾಗಿದ್ದು ಕೃಷಿಕರ ಉತ್ಪನ್ನಗಳನ್ನು ಉತ್ಪಾದಕರಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಬೆಳೆಗಾರರಿಗೆ ಗರಿಷ್ಠ ಧಾರಣೆ ಸಿಗುವಂತೆ ಪ್ರಯತ್ನಪಡುತ್ತಿದ್ದೇವೆ ಎಂದು ಹೇಳಿದರು.
ಸಂಘದ ಪ್ರಮುಖ ಯೋಜನೆಗಳು:
ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್‌ಲೈನ್ ಮಾಡುವುದು, ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರ ತೆರೆಯುವುದು. ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಸ್ವಂತ ಕಟ್ಟಡ ರಚನೆ ಮಾಡುವ ಯೋಜನೆ ಇದೆ ಎಂದು ಅಧ್ಯಕ್ಷ ಶ್ರೀಧರ ಜಿ. ಭಿಡೆ ಈ ಸಂದರ್ಭ ತಿಳಿಸಿದರು.











