ಬೆಳ್ತಂಗಡಿ: ಕೊಯ್ಯೂರಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದು ತುಂಡರಿಸಿ ಕಳ್ಳತನ ಮಾಡಿದ ಪ್ರಕರಣದ ಆರೋಪಿ ಉಮೇಶ್ ಗೌಡ ಅಪರಾಧಿಯೆಂದು ತೀರ್ಪು ನೀಡಿದ್ದು ಬೆಳ್ತಂಗಡಿ ನ್ಯಾಯಾಲಯವು ಮೂರು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದೆ.
2024 ಡಿಸೆಂಬರ್ 9ರಂದು ಕೊಯ್ಯೂರು ಗ್ರಾಮದ ಪಾಂಬೇಲು ಎಂಬಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಆರೋಪಿ ಉಮೇಶ್ ಗೌಡ ಚಿನ್ನದ ಸರವನ್ನು ಎಳೆದು ತುಂಡರಿಸಿ ಸರದೊಂದಿಗೆ ತಪ್ಪಿಸಿಕೊಂಡಿದ್ದ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಯನ್ನು ಅದೇ ದಿನ ಬಂಧಿಸಲಾಗಿತ್ತು.
ತನಿಖಾಧಿಕಾರಿಯಾದ ಬೆಳ್ತಂಗಡಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುಬ್ಬಾಪುರ ಮಠ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 126(2),309(5), 309(6) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಈ ಆರೋಪಗಳು ಬೆಳ್ತಂಗಡಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಆರೋಪಿಗೆ ಸೆ.19 ರಂದು ಮೂರು ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ರೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಸ್ಥಳ ಮಹಜರು ಪಿಎಸ್‌ಐ ಮುರುಳೀಧರ್ ನಾಯ್ಕ್, ತನಿಖಾ ಸಹಾಯಕರು ಎಎಸ್‌ಐ ಕುಲಾಜ್ಯೋತಿ ತಿಲಕ್, ಸಾಕ್ಷಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬ್ಬಂದಿ ಸತೀಶ್.ಬಿ.ಆರ್ ಸಹಕರಿಸಿದ್ದಾರೆ.











