38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಕಾಲಿಕ ಚಿಕಿತ್ಸೆ: ಮಹಿಳೆಯ ಜೀವ ರಕ್ಷಿಸಿದ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ

ಬೆಳ್ತಂಗಡಿ : ಹೃದಯಾಘಾತಕ್ಕೆ ಒಳಗಾದ ಮಧ್ಯ ವಯಸ್ಸಿನ ಮಹಿಳೆಗೆ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕದ ವೈದ್ಯರು ಜೀವ ರಕ್ಷಿಸಿದ್ದಾರೆ. ಈ ಮೂಲಕ ತುರ್ತು ಸಂದರ್ಭಗಳಲ್ಲಿ ಸಕಾಲಿಕ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಶ್ವಸಿಯಾಗಿದ್ದಾರೆ.

ಶ್ರೀಮತಿ ಮೀರಾ ಎಂಬ ಮಧ್ಯ ವಯಸ್ಸಿನ ಮಹಿಳೆಯನ್ನು ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ನಿರ್ವಹಿಸುವ ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ರೋಗಿಯು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಆರೋಗ್ಯ ಸ್ಥಿತಿ ಸಾಕಷ್ಟು ಹದಗೆಟ್ಟಿತ್ತು. ಆಸ್ಪತ್ರೆಗೆ ಆಗಮಿಸಿದ ಕೆಲವೇ ನಿಮಿಷದಲ್ಲಿ ರೋಗಿಗೆ ಹೃದಯಾಘಾತ ಸಂಭವಿಸಿದ್ದು , ಮತ್ತೆರಡು ಬಾರಿ ಹೃದಯಾಘಾತವಾಗಿದೆ. ತುರ್ತು ಚಿಕಿತ್ಸಾ ವಿಭಾಗದ ತಜ್ಞರು ಕೂಡಲೇ ೩ ಸುತ್ತಿನ ಸಿಪಿಆರ್ ಕೈಗೊಂಡಿದ್ದು ಯಶಸ್ವಿಯಾಗಿ ಎದೆಬಡಿತವನ್ನು ಪುನರುಜ್ಜೀವನಗೊಳಿಸಿದ್ದಾರೆ. ಬಳಿಕ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ರೋಗಿಯ ಆರೋಗ್ಯ ಸ್ಥಿತಿ ಸಮಸ್ಥಿತಿಗೆ ಬಂದ ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿದೆ.

ರೋಗಿಯ ತಪಾಸಣೆಯಲ್ಲಿ ರಕ್ತದಲ್ಲಿ ಅಧಿಕ ಮಟ್ಟದ ಕಾರ್ಬನ್ ಡೈಆಕ್ಸೈಡ್, ರೆಸ್ಪಿರೇಟರಿ ಆಸಿಡೊಸಿಸ್, ಹೃತ್ಕರ್ಣದ ಕಂಪನ ಅನುಭವಿಸುತ್ತಿರುವುದು ಪತ್ತೆಯಾಗಿದೆ. ಚಿಕಿತ್ಸೆ ಆರಂಭಿಸಿದ ವೈದ್ಯರ ತಂಡ ಇಂಟ್ರಾವೆನಸ್ ಆ್ಯಂಟಿಬಯೊಟಿಕ್ಸ್ ಜೊತೆಗೆ ಚಿಕಿತ್ಸೆ ಆರಂಭಿಸಿದ್ದು ಔಷಧಗಳ ಮೂಲಕ ಹೃತ್ಕರ್ಣದ ಕಂಪನವನ್ನು ನಿಯಂತ್ರಿಸಲಾಗಿದೆ. ನಿರಂತರ ನಿಗಾ ಮತ್ತು ಆರೈಕೆಯಿಂದ ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಲಾಗಿದೆ.


ಈ ಬಗ್ಗೆ ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆ ಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಡಾ. ಬಸವಪ್ರಭು “ ಗ್ರಾಮಾಂತರ ಭಾಗದಲ್ಲಿ ತುರ್ತು ಚಿಕಿತ್ಸಾಘಟಕಗಳಲ್ಲಿ ಸಕಾಲಿಕ ಚಿಕಿತ್ಸೆಗಳ ಮಹತ್ವವನ್ನು ಈ ಪ್ರಕರಣ ತಿಳಿಸುತ್ತದೆ. ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ಸೂಕ್ತವಾದ ಸಿಪಿಆರ್, ಉಸಿರಾಟದ ನಿರ್ವಹಣೆ ಹಾಗೂ ರೋಗಿಯ ಆರೋಗ್ಯವನ್ನು ಸಮಸ್ಥಿತಿಗೆ ತರುವ ಕಾರ್ಯ ಮುಂದುವರೆದ ಚಿಕಿತ್ಸೆ ನೀಡುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಸಕಾಲಿಕ ನೆರವಿಲ್ಲದೇ ರೋಗಿಯ ಜೀವ ರಕ್ಷಣೆ ಬಹಳ ಕಷ್ಟವಾಗಿತ್ತು” ಎಂದರು.


ಕೆಎಂಸಿ ಆಸ್ಪತ್ರೆಯ ತುರ್ತು ಮೆಡಿಸಿನ್ ವಿಭಾಗದ ಕ್ಲಷ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ “ ಗ್ರಾಮಾಂತರ ಪ್ರದೇಶದ ತುರ್ತು ಚಿಕಿತ್ಸಾ ಘಟಕಗಳು ರೋಗಿಯ ಜೀವ ರಕ್ಷಣೆಯಲ್ಲಿ ಮೊದಲ ಸಾಲಿನ ರಕ್ಷಣೆಯಾಗಿ ನಿಲ್ಲುತ್ತವೆ. ರೋಗಿಯ ಎದೆಬಡಿತ ಪುನರುಜ್ಜೀವನಗೊಳಿಸುವ ಹಾಗೂ ಆರೋಗ್ಯ ಸ್ಥಿರಗೊಳಿಸುವ ಪ್ರಕ್ರಿಯೆ ತ್ವರಿತವಾಗಿ ಸಂಭವಿಸುವುದೋ ಆಗ ರೋಗಿಯು ಬದುಕುಳಿಯುವ ಸಾಧ್ಯತೆಯ ಪ್ರಮಾಣವೂ ಹೆಚ್ಚುತ್ತದೆ. ರೋಗಿಯನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವ ತ್ವರಿತ ನಿರ್ಧಾರ ಹೇಗೆ ಮಹತ್ವವಾಗುತ್ತದೆ ಎಂಬುದಕ್ಕೆ ಶ್ರೀಮತಿ ಮೀರಾ ಅವರ ಪ್ರಕರಣವೇ ಉದಾಹರಣೆ” ಎಂದಿದ್ದಾರೆ.

ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ ಮತ್ತು ಕೆಎಂಸಿ ಯಿಂದ ನಿರ್ವಹಿಸಲಾಗುತ್ತಿರುವ ಅಲ್ಲಿನ ತುರ್ತು ಚಿಕಿತ್ಸಾ ಘಟಕ ಜೊತೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಅಡ್ವಾನ್ಸ್ಡ್ ಕೇರ್ ನ ಒಗ್ಗಟ್ಟಿನ ವೈದ್ಯಕೀಯ ನೆರವು ಗ್ರಾಮೀಣ ಭಾಗದಲ್ಲೂ ಸಕಾಲಿಕ ಚಿಕಿತ್ಸೆ, ಸೂಕ್ತ ನಿರ್ಧಾರ ರೋಗಿಯ ಜೀವರಕ್ಷಣೆಯಲ್ಲಿ ಮಹತ್ವದ್ದಾಗುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಘೀರ್ ಸಿದ್ದೀಕಿ ಮಾತನಾಡಿ “ ಶ್ರೀಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ ಸುತ್ತಮುತ್ತಲ ಚಾರ್ಮಾಡಿ, ಬಣಕಲ್, ಕೊಟ್ಟಿಗೆರೆ, ಮೂಡಿಗೆರೆ, ಉಜಿರೆ ಭಾಗದಲ್ಲಿ ಎಲ್ಲಾ ರೀತಿಯ ತುರ್ತು ವೈದ್ಯಕೀಯ ಸೇವೆಯನ್ನು ನೀಡುತ್ತಿದೆ ಎಂದರು.

Related posts

ಮರೋಡಿಯಲ್ಲಿ ಶ್ರೀಗುರುಪೂಜೆ ಸಂಭ್ರಮ, ಸಾಧಕರಿಗೆ ಸನ್ಮಾನ

Suddi Udaya

ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ

Suddi Udaya

ಯುವ ಸಂಸತ್ತು ಸ್ಪರ್ಧೆ: ಇಳ೦ತಿಲ ನಿವಾಸಿ ಅರ್ಪಿತಾ ಎ. ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ

Suddi Udaya
error: Content is protected !!