ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಗೆ ಒಳಪಡುವ ಬಜಿರೆ ಗ್ರಾಮದ ಹೊಸಪಟ್ಣ, ಹೊಸ ಬಜಿರೆ, ಅಜ್ಜಿಬೆಟ್ಟು ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ಎರಡು ಚಿರತೆಗಳು ಓಡಾಟ ನಡೆಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದೀಗ ತಡ ರಾತ್ರಿ ಜ.4 ರಂದು ಹೊಸ ಬಜಿರೆ ಎಂಬಲ್ಲಿ ರಬ್ಬರ್ ತೋಟದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯವನ್ನು ಕೃಷಿಕರೊಬ್ಬರು ಸೆರೆಹಿಡಿದಿದ್ದಾರೆ. ದೈತ್ಯಾಕಾರದ ಚಿರತೆ ಇದಾಗಿದ್ದು ಜನರು ಭಯಭೀತರಾಗಿದ್ದಾರೆ. ಈಗಾಗಲೇ ದನ, ನಾಯಿ ದಿನದಿಂದ ದಿನಕ್ಕೆ ಚಿರತೆ ಪಾಲಾಗುತ್ತಿದೆ. ಹೊಸಪಟ್ಣದಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ರಾತ್ರಿ ವೇಳೆ ಚಿರತೆ ಕೂಗುವ ಶಬ್ದ ಕೇಳಿ ಜನರು ಭಯಭೀತರಾಗಿದ್ದಾರೆ.
ಹೊಸಪಟ್ಣವಾಗಿ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಹೋಗುತ್ತಿದ್ದು ಪೊಷಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ದಾರಿ ಮಧ್ಯೆ ಗಿಡಗಂಟಿಗಳು ಬೆಳೆದಿದ್ದು ಇನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ ಚಿರತೆ ಎಲ್ಲಿ ಇದರಲ್ಲಿ ಅವಿತುಕೊಳ್ಳುತ್ತದೆ ಎಂಬ ಭಯ ಜನರಲ್ಲಿದ್ದು ಅರಣ್ಯ ಇಲಾಖೆಗೆ ನಾಗರೀಕರು ಮಾಹಿತಿ ತಿಳಿಸಿದ್ದಾರೆ. ಇನ್ನೂ ತಾಲೂಕಿನ ಪಾಲೇದು ಪರಿಸರದಲ್ಲಿ ಚಿರತೆ ಓಡಾಟ ನಡೆಸಿದ ಘಟನೆ ನಡೆದಿದೆ.











