ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರೂ, ಆಡಳಿತಾಂಗ ಕುಲಸಚಿವರೂ ಆದ ಪ್ರೋ. ಶ್ರೀಧರ ಎನ್ ಭಟ್ಟ ಇವರಿಗೆ ಕರ್ನಾಟಕ ಗಮಕ ಕಲಾಪರಿಷತ್ತು ,ಹಾಸನ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಸಂಸ್ಕಾರ ಭಾರತಿ ಹಾಸನ ಘಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ಗಮಕ ಹಬ್ಬ ಕವಿನಮನ ಕಾರ್ಯಕ್ರಮದಲ್ಲಿ ಡಾ ಶ್ರೀಧರ ಎನ್ ಭಟ್ಟರವರ ಹಲವು ದಶಕಗಳಿಂದ ಪ್ರಾಧ್ಯಾಪಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಆದರ್ಶ ಸೇವೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ “ಶಿಕ್ಷಾಪ್ರದಾನ ಶಿರೋಮಣಿ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಇದೇ ಗಮಕ ಹಬ್ಬ ಕವಿನಮನ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗಮಕಿ ವಿಷ್ಣುಪ್ರಸಾದ್ ಕಲ್ಲೂರಾಯ ಅವರು ಸರಳ ಕವಿ ಆಸೂರಿ ಕೆ ರಾಮಸ್ವಾಮಿ ಅಯ್ಯಂಗಾರ್ ವಿರಚಿತ “ಗೋಕರ್ಣ ಮಹಿಮಾದರ್ಶ” ಕಾವ್ಯದಿಂದ ಆತ್ಮಲಿಂಗ ಪ್ರಸಂಗವನ್ನು ತಮ್ಮ ಅದ್ಭುತ ಕಂಠಸಿರಿಯಿಂದ ಗಾಯನ ಮಾಡಿ ಶ್ರೋತೃವರ್ಗಕ್ಕೆ ಮುದವನ್ನು ನೀಡಿದರು. ಅವರ ಗಾಯನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರೂ, ಕುಲಸಚಿವರೂ ಆದ ವಿದ್ವಾನ್ ಶ್ರೀಧರ ಎನ್ ಭಟ್ಟ ಅವರು ತಮ್ಮ ವಿದ್ವತ್ಪೂರ್ಣ ವ್ಯಾಖ್ಯಾನದ ಮೂಲಕ ಶ್ರೋತೃವರ್ಗದವರನ್ನು ಮಂತ್ರಮುಗ್ಧಗೊಳಿಸಿದರು. ಬಳಿಕ ಆಸೂರಿಯವರ ಮರುಮುದ್ರಿತ ಕೃತಿ “ಭರತಭಕ್ತಿಕಾವ್ಯ” ಲೋಕಾರ್ಪಣೆಯನ್ನು ವಿದ್ವಾನ್ ಶ್ರೀಧರ ಎನ್ ಭಟ್ಟ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ವಿದುಷಿ ಪದ್ಮಜಾಶ್ರೀನಿವಾಸನ್ ಪರಿವಾರದವರು ,ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಕಲಾಶ್ರೀ ಗಣೇಶ್ ಉಡುಪ ಹಾಗೂ ಪರಿಷತ್ತಿನ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ತನುಶ್ರೀ ಪ್ರಾರ್ಥಿಸಿದರೆ ಪ್ರೊ.ಜಿ ಎನ್ ಅನಸೂಯ ಕಾರ್ಯಕ್ರಮ ನಿರೂಪಿಸಿದರು. ಮಮತಾ ವಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಕಲಾಶ್ರೀ ಗಣೇಶ್ ಉಡುಪ ವಂದಿಸಿದರು.











