September 6, 2026
ಅಪರಾಧ ಸುದ್ದಿ

ಶಿಬಾಜೆ ದಲಿತ ಯುವಕ ಶ್ರೀಧರ ಕೊಲೆ ಪ್ರಕರಣ: ಎಸ್‌ಐಟಿ ನಿಷ್ಪಕ್ಷಫಾತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು: ಪತ್ರಿಕಾ ಗೋಷ್ಠಿಯಲ್ಲಿ ಬಿ.ಕೆ ವಸಂತ್

ಬೆಳ್ತಂಗಡಿ: , ಶಿಬಾಜೆ ಗ್ರಾಮದ ಕುರುಂಜ ಎಂಬಲ್ಲಿ ಮೂರು ವರ್ಷಗಳ ಹಿಂದೆ ನಡೆದ ಶ್ರೀಧರ ಎಂಬ ದಲಿತ ಯುವಕನ ಕೊಲೆ ಪ್ರಕರಣದಲ್ಲಿ ಈ ಹಿಂದಿನ ತನಿಖೆಯಲ್ಲಿ ಅನೇಕ ಲೋಪಗಳಾಗಿದ್ದು, ಈಗ ಸರ್ಕಾರ ರಚಿಸಿರುವ ಎಸ್‌ಐಟಿ ಉನ್ನತ ಮಟ್ಟದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗದ ಸಂಘಟನಾ ಸಂಚಾಲಕ ವಸಂತ ಬಿ.ಕೆ ಒತ್ತಾಯಿಸಿದರು.

ಅವರು ಫೆ.೨೫ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮೂಡಿಗೆರೆ ದಿನ್ನಕೆರೆ ನಿವಾಸಿ ಶ್ರೀಧರ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್‌ನಲ್ಲಿ ತೋಟದ ಕಾರ್ಮಿಕನಾಗಿದ್ದ. 2022 ಡಿಸೆಂಬರ್ 17 ರಂದು ಸಂಜೆಯ ವೇಳೆ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಮಹೇಶ್ ಪೂಜಾರಿ, ಆನಂದ ಗೌಡ ಇವರುಗಳು ಸೇರಿ ಶ್ರೀಧರನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಹರೀಶ್, ಟಿ.ಸಿ.ಅಬ್ರಹಾಂ, ಪರಮೇಶ್ವರ ಗೌಡ ನೋಡಿ, ರಕ್ಷಣೆ ಮಾಡಿದ್ದರು. ಅದೇ ದಿನ ರಾತ್ರಿ ತೋಟದ ತಂತಿ ಬೇಲಿಯನ್ನು ಸರಿಸಿ ಒಳಗೆ ಪ್ರವೇಶಿಸಿ ಶ್ರೀಧರನ ಮನೆಗೆ ನುಗ್ಗಿ ಪುನ: ಅವನ ಹೊಟ್ಟೆಗೆ ಮತ್ತು ತಲೆಗೆ ಬಲವಾಗಿ ಹೊಡೆದು ವಿಷವನ್ನು ಬಲವಂತವಾಗಿ ಕುಡಿಸಿ ವಿವಸ್ತ್ರಗೊಳಿಸಿ ಕೊಲೆಯನ್ನು ಮಾಡಲಾಗಿತ್ತು ಎಂದು ಆರೋಪಿಸಿದರು.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಕೇಸು ದಾಖಲಾಗಿದ್ದರೂ ಸಮರ್ಪಕ ತನಿಖೆ ನಡೆಸಿಲ್ಲ, ರಾಜಕೀಯ ಲೇಪನವೂ ಆಗಿತ್ತು. ಆರೋಪಿಗಳ ರಕ್ಷಣೆಗೆ ಕಾಣದ ಕೈಗಳು ಪ್ರಯತ್ನ ನಡೆಸಿವೆ. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಾ, ಸಾಕ್ಷಿ ನುಡಿಯದಂತೆ ಸಾಕ್ಷಿದಾರರಿಗೆ ಬೆದರಿಕೆ ಒಡ್ಡಿದ ಪ್ರಸಂಗವು ನಡೆದಿತ್ತು. ಡಿಎಸ್‌ಎಸ್ ಪ್ರತಿಭಟನೆ ನಂತರ ಆರೋಪಿಗಳ ಬಂಧನವಾದರೂ ನಂತರ ಜಾಮೀನು ಆಗಿದೆ. ಇದರ ಬಗ್ಗೆ ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಿ, ಮನೆಯವರಿಗೆ ನ್ಯಾಯ ಒದಗಿಸಬೇಕು ಎಂದು ಬಿ.ಕೆ ವಸಂತ್ ಆಗ್ರಹಿಸಿದರು.

ತನಿಖೆಯಲ್ಲಿ ಬಹಳಷ್ಟು ಲೋಪವಾಗಿದೆ:
ದಲಿತ ಸಂಘಟನೆಗಳ ಒಕ್ಕೂಟದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾತನಾಡಿ, ಶ್ರೀಧರ ಅವರ ಕೊಲೆ ಪ್ರಕರಣದಲ್ಲಿ
ಆಗಿನ ಬಂಟ್ವಾಳದ ತನಿಖಾಧಿಕಾರಿ ಪ್ರಕಾಶ್ ರಾಥೋಡ್‌ರಿಂದ ಲೋಪವಾಗಿದೆ. ಅವರ ಕಛೇರಿಗೆ ವಿಚಾರಣೆಗೆ ಬಂದಿರುವ ಆರೋಪಿಗಳು ಹಿಂದಿರುಗುವ ವೇಳೆ ಕೊಕ್ಕಡದಲ್ಲಿವ ಬಾರೊಂದರಲ್ಲಿ ರತೀಶ್ ಗೌಡ ಎಂಬವರ ನೇತೃತ್ವದಲ್ಲಿ ಡಿನ್ನರ್ ಪಾರ್ಟಿಯನ್ನು ನಡೆಸಿ ಸೆಲ್ಪಿ ತೆಗೆದು ಸ್ಟೇಟಸ್‌ನಲ್ಲಿ ಹಾಕಿರುತ್ತಾರೆ. ಆರೋಪಿಗಳು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರೂ ರಾಜಾರೋಷವಾಗಿ ತಿರುಗಾಡುತ್ತಿದ್ದು, ತನಿಖೆಯ ಲೋಪವಾಗಿದೆ ಎಂದು ತಿಳಿಸಿದರು. ನಂತರ ಬಂದ ಡಿವೈಎಸ್‌ಪಿ ಗಾನಕುಮಾರ್ ಅವರು ಕೂಡ ಇದೇ ದಾರಿಯಲ್ಲಿ ಹೋದರು, ದೂರು ಕೊಟ್ಟವರನ್ನೇ ಆರೋಪಿ ಮಾಡಲು ಹೋಗಿದ್ದರು. ನಂತರ ಬಂದ ಸಿಐಡಿ ತನಿಖೆಯೂ ಸಮರ್ಪಕವಾಗಿಲ್ಲ ರಾಜಕೀಯ ಒತ್ತಡ ಇದಕ್ಕೆ ಕಾರಣ ಎಂದು ತಿಳಿಸಿದರು.
ಶ್ರೀಧರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕೋರ್ಟಿಗೆ ವರದಿ ನೀಡಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಹೊಟ್ಟೆಗೆ ಅಲ್ಪ ಪ್ರಮಾಣದಲ್ಲಿ ವಿಷ ಹೋಗಿದ್ದರೂ, ಅದು ಸಾವಿಗೆ ಕಾರಣವಲ್ಲ, ತಲೆಗೆ ಹೊಡೆದ ಪೆಟ್ಟಿನಿಂದ ಬ್ಲೆಡ್ ಸ್ಲಾಟ್ ಆಗಿ ಸಾವಿಗೆ ಕಾರಣ ಎಂದು ಬಂದಿದೆ. ವಿಷ ಕುಡಿದ ಶವಕ್ಕೆ ಇರುವೆ ಬರುವುದಿಲ್ಲ. ಆದರೆ ಶ್ರೀಧರನ ಶವಕ್ಕೆ ಇರುವೆ ಮುತ್ತಿಕೊಂಡಿತ್ತು. ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿಯ ತೀವ್ರ ತರದ ಪ್ರತಿಭಟನೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಸಮರ್ಪಕ ವರದಿ ಕೊಡದಿರುವುದರಿಂದ ನಾಲ್ಕು ತಿಂಗಳಲ್ಲಿ ಅವರಿಗೆ ಜಾಮೀನು ಅಗಿದೆ. ಮಾಜಿ ಶಾಸಕ ವಸಂತ ಬಂಗೇರರ ಮೂಲಕ ನಾವು ಆಗ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದೆವು. ಈಗ ಸರಕಾರ ಎಸ್‌ಐಟಿ ರಚನೆಮಾಡಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ, ತಾಲೂಕು ಸಂಚಾಲಕ ರಮೇಶ್, ತಾಲೂಕು ಸಂಘಟನಾ ಸಂಚಾಲಕ ಪ್ರಭಾಕರ ಶಾಂತಿಕೋಡಿ, ಖಜಾಂಚಿ ಶ್ರೀಧರ ಕಳೆಂಜ, ಪ್ರಮುಖರಾದ ನಾಗರಾಜ್ ಲಾಯಿಲ, ಅನಂತ ಮುಂಡಾಜೆ, ನಾರಾಯಣ ಪುದುವೆಟ್ಟು ಉಪಸ್ಥಿತರಿದ್ದರು.

Related posts

ಕಾವಳಮುಡೂರು ಧೂಮಳಿಕೆ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರು ವಧೆ ಪೊಲೀಸ್ ದಾಳಿ ಆರೋಪಿಗಳು ಪರಾರಿ

Suddi Udaya

ಚಾರ್ಮಾಡಿ ಮುಹಿದ್ದಿನ್ ಜುಮ್ಮಾ ಮಸೀದಿಗೆ ನುಗ್ಗಿದ ತಂಡದಿಂದ ಧರ್ಮಗುರುಗಳ ಮೇಲೆ ಹಲ್ಲೆ

Suddi Udaya

ಶವ ಹೂತು ಹಾಕಿದ ದೂರು ಪ್ರಕರಣ: ಎಸ್ ಐಟಿ ರಚನೆಗೆ ಮುಖ್ಯ ಮಂತ್ರಿಗಳಿಗೆ ಮನವಿ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ ಧರ್ಮಸ್ಥಳ ಶೌಚಾಲಯದ ಸುತ್ತಮುತ್ತ ಸ್ಥಳ ಮಹಜರು

Suddi Udaya

ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ

Suddi Udaya

ಕರಾಯ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ

Suddi Udaya
error: Content is protected !!