23.4 C
ಪುತ್ತೂರು, ಬೆಳ್ತಂಗಡಿ
March 16, 2026
ಚಿತ್ರ ವರದಿಪುತ್ತೂರುವರದಿ

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಆರಂಭ: ಸಿ.ಬಿ.ಜಿ ಘಟಕದ ಲೋಕಾರ್ಪಣೆ

ಪುತ್ತೂರು: ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಲಾದ ಸಿ.ಬಿ.ಜಿ (Compressed Bio Gas) ಘಟಕದ ಲೋಕಾರ್ಪಣೆ ಮಾ.15ರಂದು ಪುತ್ತೂರು ನಗರಸಭೆಯ ಸ್ವಚ್ಛ–ಬನ್ನೂರಿನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನೆರವೇರಿತು.

ಯಾವುದೇ ಊರು ಅಭಿವೃದ್ಧಿಯಾಗಬೇಕಾದರೆ ಮೊದಲು ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಪುತ್ತೂರಿನ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಬನ್ನೂರಿನ ಈ ಘಟಕದಲ್ಲಿ ನಿರ್ಮಿಸಲಾದ ಸಿಬಿಜಿ ಘಟಕವು ರಾಜ್ಯದ ನಗರಸಭೆ ವ್ಯಾಪ್ತಿಯಲ್ಲಿ ಮೊಟ್ಟಮೊದಲನೆಯದಾಗಿದೆ. ಪುತ್ತೂರಿನ ಈ ಘಟಕದ ಯಶಸ್ಸು ಮುಂದೆ ರಾಜ್ಯದ ಇತರ ನಗರಗಳಿಗೂ ಮಾದರಿ ಹಾಗೂ ಪ್ರೇರಣೆಯಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಸುಮಾರು 12 ವರ್ಷಗಳ ಸತತ ಪರಿಶ್ರಮ ಈ ಘಟಕದ ಸ್ಥಾಪನೆಯ ಹಿಂದಿದೆ. ಕಸ ಮತ್ತು ಚಿನ್ನ ಎರಡೂ ತದ್ವಿರುದ್ಧ ಎಂದು ನಾವು ಭಾವಿಸಿದರೆ, ಚಿನ್ನದ ಉದ್ಯಮದಲ್ಲಿರುವ ಕೃಷ್ಣನಾರಾಯಣ ಮುಳಿಯ ಅವರು ತಮ್ಮ ಸಂಸ್ಥೆಯ ಮೂಲಕ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಲು ಹೊರಟಿದ್ದು ನಿಜಕ್ಕೂ ಸಾಹಸದ ಕಾರ್ಯವೇ ಸರಿ. ಇದಕ್ಕೆ ಅನುಮತಿ ಪಡೆಯುವಲ್ಲಿಂದ ತೊಡಗಿ, ನಾನಾ ಹಂತದ ಪ್ರಮಾಣ ಪತ್ರಗಳನ್ನು ಪಡೆಯಲು ಬಹಳಷ್ಟು ಶ್ರಮ ಹಾಕಿದ್ದಾರೆ. ಕಸದಿಂದ ರಸ ಎಂಬ ಮಾತಿನಂತೆ ತ್ಯಾಜ್ಯದಿಂದ ಸಿಬಿಜಿ ಅನಿಲ ಇಂಧನ ಉತ್ಪಾದಿಸುವ ಘಟಕ ಆರಂಭಿಸಿದ್ದು ಸಣ್ಣ ಸಾಧನೆಯಲ್ಲ ಎಂದು ಶಾಸಕರು ಶ್ಲಾಘಿಸಿದರು.

ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌.ಎಲ್‌.ಪಿ ಮುಖ್ಯಸ್ಥರಾದ ಕೃಷ್ಣನಾರಾಯಣ ಮುಳಿಯ ಅವರು, ಈ ಘಟಕದ ಯೋಚನೆಯ ಹಂತದಿಂದ ಉದ್ಘಾಟನೆಯ ಹಂತದ ವರೆಗೆ ಕ್ರಮಿಸಿದ ಕಠಿಣ ಹಾದಿಯನ್ನು ವಿವರಿಸಿದರು. ನಾನಾ ತೊಡಕುಗಳು ಎದುರಾದರೂ ಹಿಡಿದ ಕೆಲಸವನ್ನು ಬಿಡದೆ ಕೊನೆ ಮುಟ್ಟಿಸುವ ಛಲದಿಂದ ತಾವು ಹಾಗೂ ತಮ್ಮ ಜತೆ ಸಹಕರಿಸಿ ಎಲ್ಲ ತಂಡಗಳು ಶ್ರಮಿಸಿರುವುದನ್ನು ನೆನಪಿಸಿಕೊಂಡರು.

ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌.ಎಲ್‌.ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟ್ಯಾಪ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಾರಥ್ಯದಲ್ಲಿ, ಪುತ್ತೂರು ನಗರಸಭೆಯ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಂಡಿದೆ.

ಸಮಾರಂಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌.ಎಲ್‌.ಪಿ. ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಎ.ಸಿ.ಪಿ ಸ್ಟೆಲ್ಲಾ ವರ್ಗೀಸ್, ಪುತ್ತೂರು ನಗರಸಭೆಯ ಪೌರಾಯುಕ್ತೆ ವಿದ್ಯಾ ಕಾಳೆ ಭಾಗವಹಿಸಿದ್ದರು.

ಗೌರವ ಉಪಸ್ಥಿತಿಯಾಗಿ ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ರೋಟರಿ ಮಾಜಿ ಜಿಲ್ಲಾ ಗವರ್ನರ್ (ಡಿಸ್ಟ್ರಿಕ್ಟ್ 3181) ಎಚ್.ಆರ್. ಕೇಶವ, ರಿಟ್ಯಾಪ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ಡಾ. ದಿವ್ಯ ಪ್ರಶಾಂತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೊ. ಶಶಿಧರ್ ಕಿನ್ನಿಮಜಲು ಉಪಸ್ಥಿತರಿದ್ದು ಶುಭ ಹಾರೈಸಿದರು.

ನಗರದಲ್ಲಿ ಸಂಗ್ರಹವಾಗುವ ಸಾವಯವ ತ್ಯಾಜ್ಯವನ್ನು ಈ ಸಿ.ಬಿ.ಜಿ ಘಟಕದ ಮೂಲಕ ಸಂಸ್ಕರಿಸಿ ಬಯೋ ಗ್ಯಾಸನ್ನು ಉತ್ಪಾದಿಸಲಾಗುತ್ತದೆ. ಇದರಿಂದ ತ್ಯಾಜ್ಯ ನಿರ್ವಹಣೆ ಸುಧಾರಣೆ, ಪರಿಸರ ಮಾಲಿನ್ಯ ಕಡಿತ, ಕಾರ್ಬನ್ ಡೈಆಕ್ಸೈಡ್ ವಿಸರ್ಜನೆಯ ತಗ್ಗುವಿಕೆ ಸೇರಿದಂತೆ ಹಲವಾರು ಪ್ರಯೋಜನಗಳು ಲಭ್ಯವಾಗಲಿವೆ. ಅಲ್ಲದೆ ಉತ್ಪಾದನೆಯಾಗುವ ಗ್ಯಾಸನ್ನು ವಾಹನಗಳಿಗೆ ಇಂಧನವಾಗಿ ಬಳಸುವ ಸಾಧ್ಯತೆ ಕೂಡ ಇದೆ.

Related posts

ಮೊಗ್ರು: ಕಡಮ್ಮಾಜೆ ಫಾರ್ಮ್ ನಲ್ಲಿ 3ನೇ ವರ್ಷದ ಜೇನು ಕೃಷಿ ಮಾಹಿತಿ ಶಿಬಿರ

Suddi Udaya

ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ವತಿಯಿಂದ ಐದು ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya

ಉಜಿರೆ: ಸೀತಾಪಹಾರ – ಜಟಾಯು ಮೋಕ್ಷ ತಾಳಮದ್ದಳೆ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ಬೈಕ್ ಮತ್ತು ಪಿಕಪ್ ವಾಹನ ನಡುವೆ ಅಪಘಾತ, ಬೈಕ್ ಸವಾರಿಗೆ ಗಂಭೀರ ಗಾಯ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!