September 17, 2026
ಚಿತ್ರ ವರದಿವರದಿಸಂಘ-ಸಂಸ್ಥೆಗಳು

ಕಾವಳಕಟ್ಟೆ ವಲಯ ಬಂಟರ ಸಂಘದಿಂದ ಸಮಾಜಮುಖಿ ಚಿಂತನಾ ಕಾರ್ಯಕ್ರಮ

ಬಂಟ್ವಾಳ : ಸಂಘಟನೆ ಎಂಬುವುದು ಊರಿನ ಸಾಮಾಜಿಕ ಬಲ. ಇದು ಕೇವಲ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಪ್ರತಿಯೊಬ್ಬ ಸದಸ್ಯನ ಕಷ್ಟ-ಸುಖಗಳೊಂದಿಗೆ ಬೆರೆತು ಸರ್ವರ ಏಳಿಗೆಗೆ ಪೂರಕವಾಗುವ ಶಕ್ತಿಯಾಗಬೇಕು ಎಂದು ಕಾವಳಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ ನರವಲ್ದಡ್ಡ ಅಭಿಪ್ರಾಯಪಟ್ಟರು.

ಇವರು ಇರ್ವತ್ತೂರು ಗ್ರಾಮದ ಬಾಲಕೃಷ್ಣ ಶೆಟ್ಟಿ ಅವರ ನಿವಾಸದಲ್ಲಿ ಜರುಗಿದ ಕಾವಳಕಟ್ಟೆ ವಲಯ ಬಂಟರ ಸಂಘದ ಗ್ರಾಮವಾರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಸ್ಪರ ಸಹಕಾರ ಮತ್ತು ಅಚಲ ನಂಬಿಕೆಯೇ ಸಂಘಟನೆಯ ಅಡಿಪಾಯ. ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಶೈಕ್ಷಣಿಕ, ಸಾಮಾಜಿಕ ಅಥವಾ ಆರ್ಥಿಕ ಯಾವುದೇ ಸಂಕಷ್ಟ ಗಳಿದ್ದರೂ ಸಂಘ ಸದಾ ನೆರವಿಗಿರುತ್ತದೆ. ಇಂತಹ ಸಾಮಾಜಿಕ ಕಾರ್ಯಕ್ಕೆ ಪ್ರತಿಯೊಬ್ಬ ಸದಸ್ಯನು
ಕೈಜೋಡಿಸಿದಾಗ ವಲಯವು ಜಿಲ್ಲೆ ಮತ್ತು ರಾಜ್ಯದಲ್ಲಿ ಮಾದರಿಯ ಸಂಘಟನೆಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಬಂಟ ಸಂಘದ ಹಿರಿಯ ಸದಸ್ಯ ಶ್ರೀಧರ ಭಂಡಾರಿ ಬೆಂಗತ್ತೋಡಿ ಮಾತನಾಡಿ , ಬಂಟ ಸಮುದಾಯಕ್ಕೆ ತನ್ನದೇ ಆದ ತ್ಯಾಗ ಮತ್ತು ಪರಂಪರೆಯ ಭವ್ಯ ಇತಿಹಾಸವಿದೆ. ಆಧುನಿಕತೆಯ ಒತ್ತಡದಲಿ ಯುವ ಪೀಳಿಗೆ ಮೂಲ ಆಚಾರ-ವಿಚಾರ, ಕೌಟುಂಬಿಕ ಬಾಂಧವ್ಯ ಮತ್ತು ಪೂರ್ವಜರು ನಡೆದು ಬಂದ ಸಂಸ್ಕಾರಗಳನ್ನು ಮರೆಯುತ್ತಿರುವುದು ವಿಷಾದನೀಯ. ನಮ್ಮ ಸಂಸ್ಕೃತಿಯೇ ನಮ್ಮ ಗುರುತು. ಸಂಘದ ಮೂಲಕ ಯುವಕರಿಗೆ ಬಂಟರ ಇತಿಹಾಸ ಮತ್ತು ಸಂಸ್ಕಾರಗಳ ಅರಿವು ಮೂಡಿಸುವ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು. ಬೇರು ಗಟ್ಟಿಯಾಗಿದ್ದರೆ ಮಾತ್ರ ಮರ ಬಲಿಷ್ಠವಾಗಿರುತ್ತದೆ. ಹಾಗೆ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿದ್ದರೆ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದು ಮಾರ್ಗದರ್ಶನ ನುಡಿದರು.

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಪುನೀತ್ ಶೆಟ್ಟಿ ಮಾತನಾಡಿ, ನಮ್ಮ ಸಂಘಟನೆಯು ಕೇವಲ ಕಾಗದದ ಮೇಲಿರುವ ಹೆಸರಾಗಬಾರದು. ಅದು ಪ್ರತಿ ಹಳ್ಳಿಯ ಕೊನೆಯ ಮನೆಯ ಬಂಟ ಬಂಧುವಿಗೂ ಆತ್ಮವಿಶ್ವಾಸ ನೀಡುವ ಆಸರೆಯಾಗಬೇಕು.ಇಂತಹ ಗ್ರಾಮವಾರು ಸಭೆಗಳ ಆಶಯವೇ ನಮ್ಮವರನ್ನು ನೇರವಾಗಿ ಭೇಟಿಯಾಗಿ ವಾಸ್ತವ ಸ್ಥಿತಿಗತಿ ಮತ್ತು ಕಷ್ಟ-ಸುಖಗಳನ್ನು ಅರಿಯುವುದು. ಪ್ರಸ್ತುತ ವಿದ್ಯಮಾನಗಳ ನಡುವೆ ನಮ್ಮ ಸಮಾಜದ ಯುವಕರು ಹಾಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಒಂಟಿಯಲ್ಲ ಎಂಬ ಭರವಸೆಯ ಬೆಳಕನ್ನು ನೀಡಬೇಕು. ಎಂದು ಸಂಘಟನಾತ್ಮಕ ನೆಲೆಗಟ್ಟಿನ ಪ್ರಸ್ತಾವನೆಯನ್ನು ವಿವರಿಸಿದರು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸಂಘಟನಾ ಚಟುವಟಿಕೆಗಳ ವರದಿ ವಾಚಿಸಿ, ಸಂಘದ ಆರ್ಥಿಕ ವ್ಯವಹಾರಗಳ ಲೆಕ್ಕಪತ್ರದ ವಿವರಗಳನ್ನು ತೆರೆದಿಟ್ಟರು. ಬಳಿಕ ಸಂಘದ ನಿಧಿ ಬಳಕೆಯ ಕುರಿತು ಸಮಗ್ರ ಮಾಹಿತಿ ನೀಡಿ, ಸಂಘಟನೆಯ ಆರ್ಥಿಕ ಸುಭದ್ರತೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಸಾಮಾಜಿಕ ಕಳಕಳಿಯಿಂದ ಗ್ರಾಮದಲ್ಲಿ ಬಡತನದಲ್ಲಿದ್ದು ಅನಾರೋಗ್ಯಕ್ಕೀಡಾದವರಿಗೆ ವಲಯ ಮತ್ತು ತಾಲೂಕು ಸಂಘದ ವತಿಯಿಂದ ವಿಶೇಷ ಆರ್ಥಿಕ ನೆರವು ನೀಡಲು ನಿರ್ಣಯಿಸಲಾಯಿತು. ತಿಂಗಳಿಗೆ 100 ರೂಪಾಯಿ ಕಿರು ಉಳಿತಾಯ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಹೊಸ ಸದಸ್ಯತ್ವಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವೇದಿಕೆಯಲ್ಲಿ ವಲಯ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಬಿಯಂತಬೆಟ್ಟು, ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಪಣೆಕಲ, ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಕಿಶೋರ್ ರೈ ಹಾಗೂ ಆತಿಥೇಯರಾದ ಶ್ರೀ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸದಸ್ಯ ಗಣೇಶ ಶೆಟ್ಟಿ ನಿರೂಪಿಸಿ, ವಂದಿಸಿದರು.

Related posts

ವೇದ ವಿದ್ವಾಂಸರಾದ ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು “ಹವ್ಯಕ ವೇದ ರತ್ನ” ಪ್ರಶಸ್ತಿಗೆ ಆಯ್ಕೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ-ಅನ್ವೇಷಣಾ-2024

Suddi Udaya

ಪಣಕಜೆ ಸಬರಬೈಲು ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಡಿ.ಎಚ್.ಒ ಭೇಟಿ

Suddi Udaya

ಉಜಿರೆ: ಹಳೆಪೇಟೆ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!