ಬೆಳ್ತಂಗಡಿ : ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ಬಂದಿದ್ದ ಅನ್ಯ ಧರ್ಮದ ಅಪ್ರಾಪ್ತ ಬಾಲಕನಿಗೆ (17ವ) ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಬಾಲಕಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಬಾಲಕನ ತಂದೆ ಘಟನೆ ನಡೆದು ಏಳು ದಿನಗಳ ಬಳಿಕ ಮಾ.18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕ ಮಾ.11 ರಂದು ಉಜಿರೆ ಜಾತ್ರೆಗೆ ಬಂದಿದ್ದು, ರಾತ್ರಿ 10.30 ರ ಸುಮಾರಿಗೆ ಜಾತ್ರೆಯಲ್ಲಿ ಜಾಯಿಂಟ್ ವೀಲ್‌ನ ಹತ್ತಿರ ಸಹಪಾಠಿ ವಿದ್ಯಾರ್ಥಿನಿಯರು ಮೊಬೈಲ್‌ನ್ನು ಆತನಲ್ಲಿ ಕೊಟ್ಟು ಅವರು ಆಟ ಆಡಲು ಹೋದಾಗ, ಅವರ ಬರುವಿಕೆಯನ್ನು ಕಾಯುತ್ತಿರುವ ಸಂದರ್ಭ ಅಲ್ಲಿಗೆ ಬಂದ ಕೆಲವರು ನಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ.
ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿದ್ದಾನೆ ಎಂಬುದಾಗಿ ಬಾಲಕನ ತಂದೆ ಮಾ.18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 30/2026, ಕಲಂ: 137(2), 115(2), 351(2) , 352, 352(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.













