ಇಂದಬೆಟ್ಟು ಗ್ರಾಮದ ಪೇರಾಲ್ದಪಲ್ಕೆ ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಇದರ ವಾರ್ಷಿಕ ಪರ್ವ ಮತ್ತು ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಲಕ್ಷ್ಮಣ್ ಜಿ.ಎಸ್ ರವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಮೇ 13 ರಂದು ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನಮ್ಮ ತುಳುನಾಡು ಅನೇಕ ಆದರ್ಶ ಅವಳಿ ವೀರರು ಸತ್ಯ, ಧರ್ಮ, ನ್ಯಾಯಕ್ಕಾಗಿ ವೀರತನದಿಂದ ಹೋರಾಡಿ ತಮ್ಮ ಚಾರಿತ್ರಿಕ ಸಾಧನೆಗಳ ಮೂಲಕ ದೈವತ್ವ ಪಡೆದು ಆರಾಧ್ಯ ಸ್ಥಾನಕ್ಕೇರಿದ ಸತ್ಯ ಧರ್ಮದ ಭೂಮಿಯಾಗಿದೆ. ಇಂಥ ಸಾಧಕ ಅವಳಿ ವೀರ ಪುರುಷರ ಸಾಲಿನಲ್ಲಿ ನಾಡಿಗೆ ಸತ್ಯವನ್ನು ಸಾರಿದ ಸತ್ಯಸಾರಮಾನಿ ಕಾನದ ಕಟದರು ಕೂಡ ಸಾಧಕ ಪುರುಷರಾಗಿ ಇಂದಿಗೂ ಆರಾಧ್ಯರೆನಿಸಿಕೊಂಡವರು. ಸತ್ಯ ಧರ್ಮ ನೆಲೆ ನಿಂತ ತುಳುನಾಡಿನಲ್ಲಿ ಸುಮಾರು 450 ವರ್ಷಗಳ ಪೂರ್ವದಲ್ಲಿ ಅವಳಿ ವೀರರಾದ ಕಾನದ ಕಟದರು ಬೆಳ್ತಂಗಡಿ ತಾಲೂಕಿನ ಬಂಗಾಡಿಯಲ್ಲಿ ತಾಯಿ ಬೊಲ್ಲೆ ಮತ್ತು ಅಂದ್ರ ದಂಪತಿಯ ಮಕ್ಕಳಾಗಿ ಜನಿಸಿ ತಮ್ಮ ಕನಿಷ್ಠ ಜೀವಿತವಧಿಯಲ್ಲಿ ಗೊಡ್ಡು ಸಂಪ್ರದಾಯ, ಮೌಢ್ಯಗಳನ್ನು ಸವಾಲಾಗಿ ಸ್ವೀಕರಿಸಿ ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆದ ಆದರ್ಶ ಪುರುಷರೆಂಬುದು ಐತಿಹಾಸಿಕ ಸಂಗತಿಯಾಗಿದೆ. ಶ್ರೇಷ್ಠ ಅವಳಿ ವೀರ ಪುರುಷರೆನಿಕೊಂಡ ಕಾನದ ಕಟದರು ಸುಮಾರು 400-450 ವರ್ಷಗಳಿಂದ ಸತ್ಯಸಾರಮಾನಿ, ಸತ್ಯಪದ್ನಾಜಿ, ಸಾರಮುಪ್ಪಣ್ಯ ಮುಂತಾದ ದೈವತ್ವದ ಹೆಸರುಗಳಿಂದ ತುಳುನಾಡಿನ ದೈವಾರಾಧಕರಿಂದ ಆರಾಧಿಸಲ್ಪಡುತ್ತಿದ್ದಾರೆ. ಸತ್ಯ ಸಾರಮಾನಿ ಕಾನದ ಕಟದರು ಸಾಮಾಜಿಕವಾಗಿ ಬೇರೂರಿದ್ದ ಊಳಿಗಮಾನ್ಯ ಪದ್ಧತಿ, ಪಾಳೇಗಾರಿಕೆ, ಜಾತೀಯತೆ, ಅಸ್ಪೃಶ್ಯತೆ ಮುಂತಾದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಡಿದವರು ಮಾತ್ರವಲ್ಲದೆ ಇಕ್ಕೇರಿ ಅರಸರಾದ ಕೆಳದಿ ಪೂಜ್ಯ ಶಿವಪ್ಪನಾಯಕ ಅವರಿಂದ ‘ಅತಿಕಾರೆ’ ( ಅತ್ಯರೆ) ಎಂಬ ಶ್ರೇಷ್ಠ ಭತ್ತದ ತಳಿಯನ್ನು ತುಳುನಾಡಿಗೆ ತಂದು ಈ ತಳಿ ನಾಡಿನಾದ್ಯಂತ ಪಸರಿಸಲು ಕಾರಣೀಭೂತರಾದ ಮೊದಲಿಗರೆಂಬುದು ಜನಪದ ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಯಾಗಿದೆ.
ತುಳುನಾಡಿನಲ್ಲಿ ಸತ್ಯದ ‘ಬಿದೆ’ ಎಂದು ನಂಬಲಾಗುತ್ತಿರುವ ‘ಅತಿಕಾರೆ’ (ತಳಿ) ಭತ್ತವನ್ನು ಬಂಗರಸರು ಆಳಿದ ಬಂಗಾಡಿ ಪುಣ್ಯಭೂಮಿಯಲ್ಲಿ ಬಿತ್ತಿ ಬೆಳೆದು ಈ ತಳಿಯ ಮಹತ್ವವನ್ನು ತುಳುವರಿಗೆ ತಿಳಿಸಿದವರಾಗಿದ್ದು ಕೆಳದಿ ಅರಸರಿಗೆ ಕೊಟ್ಟ ಮಾತಿನಂತೆ ‘ಅತಿಕಾರೆ’ ಭತ್ತದ ತಳಿಯನ್ನು ತುಳುನಾಡಿನಾದ್ಯಂತ ಪಸರಿಸಲು ಕಾರಣಕರ್ತರಾಗಿ ಇದರ ಸಾಂಸ್ಕೃತಿಕ ಮಹಿಮೆಯನ್ನು ಎತ್ತಿ ಹಿಡಿದವರು ಸತ್ಯಸಾರಮಾನಿ ಕಾನದ ಕಟದರು. ಬಂಗಾಡಿ ಬೆಟ್ಟದ ಕೋಡಿ ಕೊಡಂಗೆಯಲ್ಲಿ
ಗುಡ್ಡ ಅಗೆದು ಗದ್ದೆ ಮಾಡಿ ಮೌಢ್ಯಾಚಾರಣೆಗೆ ಸವಾಲಾಗಿ ಸುಬ್ರಹ್ಮಣ್ಯ ಕುಲ್ಕುಂದ ಜಾನುವಾರು ಜಾತ್ರೆಯಿಂದ
‘ಕಾರಿ’ ‘ಕಬಿಲ’ ಎಂಬ ( ಸಾಂಪ್ರದಾಯಿಕ ನಿಷಿದ್ಧ) ಬಣ್ಣಗಳ ವಿಶೇಷ ಜೋಡೆತ್ತುಗಳನ್ನು ತಂದು ತಮ್ಮ ಸಾಧನೆಗಳಿಂದ
ಅವಮಾನಿಸಿದವರಲ್ಲಿ ಅಚ್ಚರಿ ಮೂಡಿಸಿದವರು ಸತ್ಯ ಸಾರಮಾನಿ ಕಾನದ ಕಟದರು. ಅತಿಕಾರೆ ಭತ್ತವನ್ನು ಬಂಗಾಡಿ ಮತ್ತು ಅಲೇರಿಗಳಲ್ಲಿ ಬಿತ್ತಿ ಕೃಷಿ ಸಂಸ್ಕೃತಿಯ ಶ್ರೇಷ್ಠತೆಯೊಂದಿಗೆ ಸಮುದಾಯದ ಸ್ವಾಭಿಮಾನವನ್ನು ಎತ್ತಿ ಹಿಡಿದ ಕಾನದ ಕಟದರು ತಮ್ಮ ಸಾಹಸ ಸಾಧನೆಗಳಿಂದ ನಾಡಿನ ಗಮನ ಸೆಳೆದವರು.
ವ್ಯವಸ್ಥೆಯ ಸಂಚು, ಷಡ್ಯಂತ್ರಗಳಿಗೆ ಬಲಿಯಾದ ಅವಳಿ ವೀರರಾದ ಕಾನದ ಕಟದರು ಅಸಾಮಾನ್ಯ ಸತ್ಯ, ಧರ್ಮದ ನಡಿಗೆಯಿಂದಲೂ ಸಾಹಸ, ಸಾಧನೆಗಳ ಕಾರಣದಿಂದಲೂ ದೈವತ್ವಕ್ಕೇರಿದವರು . ಬಳಿಕ ಕುಲಬಾಂಧವರು ಮಾತ್ರವಲ್ಲದೆ ನಾಡಿನ ದೈವಭಕ್ತ ಜನರು ಕಾನದ ಕಟದರ ಜನ್ಮಭೂಮಿಯಾಗಿ ಚಾರಿತ್ರಿಕ ಶ್ರೇಷ್ಠತೆಯನ್ನು ಪಡೆದಿರುವ ಬಂಗಾಡಿಯೂ ಸೇರಿದಂತೆ ನಾಡಿನಾದ್ಯಂತ ನೂರಾರು ದೇವಸ್ಥಾನಗಳಲ್ಲಿ ಕುಲದೈವಗಳಾಗಿ ನಂಬಿಕೊಂಡು ಬಂದಿದ್ದಾರೆ. ಇಡೀ ತುಳುನಾಡು ಮಾತ್ರವಲ್ಲದೆ ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಸತ್ಯಸಾರಮಾನಿ, ಸಾರಮುಪ್ಪಣ್ಯ, ಸತ್ಯಪದ್ನಾಜಿ ಇತ್ಯಾದಿ ದೈವತ್ವದ ಹೆಸರುಗಳಲ್ಲಿ ತಮ್ಮ ಪ್ರೀತಿ, ಭಕ್ತಿಯ ಕುಲ ದೈವಗಳಾಗಿ ಆರಾಧಿಸಲ್ಪಡುತ್ತಿರುವ ಸತ್ಯಸಾರಮಾನಿ ಕಾನದ ಕಟದರನ್ನು ಅವರ ಪೂರ್ವಜರಿಂದ ಆರಂಭಿಸಿ ಬಂಗಾಡಿ ಇಂದಬೆಟ್ಟು ಗ್ರಾಮದ ಪೇರಾಲ್ದಪಲ್ಕೆ ಎಂಬಲ್ಲಿ ಶತಮಾನದಿಂದ ಸ್ಥಳೀಯರು ಮರದ ನೆರಳಲ್ಲಿ ಕಲ್ಲು ಹಾಕಿ ನಂಬಿಕೊಂಡು ಬಂದಿದ್ದು ಬಳಿಕ ಕಾನದ ಕಟದರ ತಂದೆ, ತಾಯಿ ಮತ್ತು ಕುಟುಂಬದವರು ನೆಲೆಸಿದ್ದು ವೀರ ಪುರುಷರ ಜನ್ಮಸ್ಥಳವೆಂಬ ಶತಮಾನಗಳಿಂದ ಪ್ರತೀತಿ ಇರುವ (ಈಂದೊಟ್ಟು) ಪೇರಾಲ್ದಪಲ್ಕೆ ಎಂಬಲ್ಲಿ ಸುಮಾರು 75 ವರ್ಷಗಳ ಹಿಂದೆ ಸ್ಥಳೀಯ ಹಿರಿಯ ಜಾತಿ ಬಾಂಧವರ ಭಕ್ತಿಪೂರ್ವಕ ಪ್ರಯತ್ನ ಮತ್ತು ಸತತ ಹೋರಾಟದ ಫಲವಾಗಿ ಸತ್ಯ ಸಾರಮಾನಿ ಪುಟ್ಟ ದೈವಸ್ಥಾನ ನಿರ್ಮಾಣಗೊಂಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಜಾತಿ ಪ್ರಮುಖರ ಸಹಭಾಗಿತ್ವದಲ್ಲಿ ಐದು ವರ್ಷಗಳಿಂದ ನಡೆದ ಹಂತ ಹಂತವಾಗಿ ನಡೆದ ಅಧ್ಯಯನದಂತೆ ಹಾಗೂ ಇತ್ತೀಚೆಗೆ ನಡೆದ ಮಹತ್ವದ ಸಮಾಲೋಚನಾ ಸಭೆಯಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಈಂದೊಟ್ಡು ಪೇರಾಲ್ದಪಲ್ಕೆ ಸತ್ಯಸಾರಮಾನಿ ಕಾನದ ಕಟದರ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸುವ ಬಗ್ಗೆ ಸರ್ವಾನುಮತದಿಂದ ಸಂಕಲ್ಪ ಕೈಗೊಳ್ಳಲಾಗಿದೆ. ಕೆಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಬಂಗಾಡಿ ಸತ್ಯಸಾರಮಾನಿ ದೈವಸ್ಥಾನವು ಸುತ್ತಮುತ್ತಲಿನ ಜಾತಿಬಾಂಧವರ ಮತ್ತು ದಾನಿಗಳ ತನು ಮನ ಧನಗಳ ಸಹಕಾರದೊಂದಿಗೆ, ಜೀರ್ಣೋದ್ಧಾರ ನಡೆಯಬೇಕಾಗಿದ್ದು ದೈವಜ್ಞರ ಮಾರ್ಗದರ್ಶನದಂತೆ ಸುಮಾರು 40 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಸತ್ಯಸಾರಮಾನಿ ದೈವಸ್ಥಾನದ ಅದ್ಭುತ ವಿನ್ಯಾಸ ನೀಲಿ ನಕಾಶೆ ಸಿದ್ಧಗೊಂಡಿದೆ. ಸತ್ಯ ಸಾರಮಾನಿ ದೈವಸ್ಥಾನದ ಮುಂದೆ ಬೆಮ್ಮೆರೆ ಗುಂಡ, ತಾಯಿ ಬೊಲ್ಲೆ, ಅಂದ್ರರ ಪುತ್ಥಳಿ ಮೂಡಿ ಬರಲಿದೆ.
ಇದೀಗ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದ್ದು ದೈವಸ್ಥಾನದ ಜೀರ್ಣೋದ್ಧಾರದ
ಹಿನ್ನೆಲೆಯಲ್ಲಿ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮವು ಮೇ 17ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಅವರು ವಿಜ್ಞಾಪನಾ ಪತ್ರದ ಬಿಡುಗಡೆ ಮಾಡಲಿರುವರು, ದೈವಸ್ಥಾನದ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ, ಸರಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಂಜೀವ ಆರ್., ಆಡಳಿತ ಸಮಿತಿ ಅಧ್ಯಕ್ಷರಾದ ನಾರಾಯಣ್, ಪ್ರಧಾನ ಕಾರ್ಯದರ್ಶಿ ನೇಮಿರಾಜ ಕೆ, ಉಪಾಧ್ಯಕ್ಷರಾದ ರಮೇಶ್ ಆರ್. ಬೆಳ್ತಂಗಡಿ ಆಡಳಿತ ಸಮಿತಿಯ ಗೌರವಾಧ್ಯಕ್ಷ , ವೆಂಕಣ್ಣ ಕೊಯ್ಯೂರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ ವಸಂತ್ ಬೆಳ್ತಂಗಡಿ ಉಪಸ್ಥಿತರಿದ್ದರು.













