30.9 C
ಪುತ್ತೂರು, ಬೆಳ್ತಂಗಡಿ
June 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಸಾರಿಗೆ ಬಸ್‌ನಲ್ಲಿ ಹೆಚ್ಚಿದ ಜನಸಂದಣಿ; ವಿದ್ಯಾರ್ಥಿಗಳ, ಉದ್ಯೋಗಿಗಳ ಪರದಾಟ; ಹೆಚ್ಚುವರಿ ಬಸ್‌ಗೆ ಪ್ರಯಾಣಿಕರ ಆಗ್ರಹ

✍🏻ಮನೀಷ್ ವಿ. ಅಂಚನ್ ಪಾಲೇದು

ಬೆಳ್ತಂಗಡಿ: ಧಾರ್ಮಿಕ ಕ್ಷೇತ್ರವಾಗಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಯಾತ್ರಿಕರನ್ನು ಆಕರ್ಷಿಸುವ ಧರ್ಮಸ್ಥಳದಲ್ಲಿ ದಿನದಿಂದ ದಿನಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದ್ದು, ಇದರ ನೇರ ಪರಿಣಾಮ ಸ್ಥಳೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಬೀಳುತ್ತಿದೆ. ವಿಶೇಷವಾಗಿ ಧರ್ಮಸ್ಥಳ-ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ-ಸೌತಡ್ಕ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಉಂಟಾಗಿರುವ ವಿಪರೀತ ಜನದಟ್ಟಣೆಯಿಂದ ಶಾಲಾ ಮಕ್ಕಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಉದ್ಯೋಗಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಬಸ್ ಏರಲು ಅವಕಾಶವೇ ಇಲ್ಲ: ಪ್ರತಿದಿನ ಬೆಳಗ್ಗಿನ ವೇಳೆಯಲ್ಲಿ ಧರ್ಮಸ್ಥಳ ಬಸ್ ನಿಲ್ದಾಣದಿಂದ ಹೊರಡುವ ಬಹುತೇಕ ಬಸ್‌ಗಳು ಯಾತ್ರಿಕರಿಂದಲೇ ತುಂಬಿ ತುಳುಕುತ್ತಿರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಬಸ್ ಏರಲು ಅವಕಾಶವೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೋಳಿಯಾರ್ ಭಾಗದ ವಿದ್ಯಾರ್ಥಿಗಳು ನಿಡ್ಲೆ ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ ತೆರಳಲು, ಬೂಡುಜಾಲು, ಕಾಪಿನಾಬಾಗಿಲು, ಭಾಗದ ವಿದ್ಯಾರ್ಥಿಗಳು ಕೊಕ್ಕಡ ಮೂಲಕ ನೆಲ್ಯಾಡಿ ಮತ್ತು ಬೆಥನಿ ಐಟಿಐ ಕಾಲೇಜಿಗೆ ತಲುಪಲು ಪ್ರತಿದಿನ ಪರದಾಡುವಂತಾಗಿದೆ. ನಿಗದಿತ ಸಮಯಕ್ಕೆ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತಲುಪಬೇಕಾದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉದ್ಯೋಗಿಗಳೂ ಇದೇ ಸಂಕಷ್ಟವನ್ನು ಶಾಲಾರಂಭದ ದಿನದಿಂದ ಎದುರಿಸುತ್ತಿದ್ದಾರೆ.


ಸ್ಥಳೀಯ ಪ್ರಯಾಣಿಕರಿಗೆ ಆದ್ಯತೆ ಇಲ್ಲ?: ಸ್ಥಳೀಯ ಪ್ರಯಾಣಿಕರ ಆರೋಪದಂತೆ, ಧರ್ಮಸ್ಥಳ ಡಿಪ್ಪೋದ ಕೆಲವೊಂದು ಸುಬ್ರಹ್ಮಣ್ಯ ಮಾರ್ಗದ ಬಸ್‌ಗಳಲ್ಲಿ ಸ್ಥಳೀಯ ಪ್ರಯಾಣಿಕರಿಗಿಂತ ಯಾತ್ರಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯರು ಬಸ್‌ಗೆ ಹತ್ತಲು ಮುಂದಾದಾಗ ಕೊನೆಯಲ್ಲೇ ಹತ್ತಬೇಕು ಎಂದು ಸೂಚಿಸಲಾಗುತ್ತಿದ್ದು, ಯಾತ್ರಿಕರು ಮೊದಲು ಹತ್ತಿದ ಬಳಿಕ ಉಳಿದ ಸ್ಥಳವಿದ್ದರೆ ಮಾತ್ರ ಸ್ಥಳೀಯರಿಗೆ ಅವಕಾಶ ದೊರೆಯುತ್ತಿದೆ ಎನ್ನಲಾಗಿದೆ. ಪರಿಣಾಮ, ಬಸ್‌ಗಳು ಯಾತ್ರಿಕರಿಂದಲೇ ಸಂಪೂರ್ಣ ಭರ್ತಿಯಾಗುತ್ತಿದ್ದಂತೆ ಶಾಲಾ ಮಕ್ಕಳು, ಶಿಕ್ಷಕರು, ಉದ್ಯೋಗಿಗಳು ಹಾಗೂ ಇತರ ಸ್ಥಳೀಯ ಪ್ರಯಾಣಿಕರು ನಿಲ್ದಾಣದಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.


ಸ್ಪಂದನೆ ಇಲ್ಲ: ಈ ಕುರಿತು ಟಿ.ಸಿ. ಹಾಗೂ ಡಿಪ್ಪೋ ವ್ಯವಸ್ಥಾಪಕರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಮೊದಲ ಆದ್ಯತೆ, ಸ್ಥಳೀಯರಿಗೆ ನಂತರ ಅವಕಾಶ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂಬ ಭಾವನೆ ಮೂಡಿರುವುದು ವಿಷಾದನೀಯ.
ನಿರ್ವಾಹಕರ ಧೋರಣೆ: ಕೊಕ್ಕಡ ಸೇರಿದಂತೆ ಮಧ್ಯಂತರ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಬಸ್‌ಗೆ ಹತ್ತಲು ಮುಂದಾದಾಗ ಕೆಲವೊಂದು ನಿರ್ವಾಹಕರು ಅಸಭ್ಯವಾಗಿ ವರ್ತಿಸುವುದು, ಬಾಯಿಗೆ ಬಂದAತೆ ಮಾತನಾಡುವುದು ಹಾಗೂ ಪ್ರಯಾಣಿಕರ ಮೇಲೆ ರೇಗುವುದು ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ. ಇಂತಹ ಘಟನೆಗಳ ಬಗ್ಗೆ ದೂರುಗಳು ಕೇಳಿಬಂದರೂ ಸಂಬAಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.


ಸಂಜೆಯೂ ರಶ್!: ಸಂಜೆಯ ವೇಳೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸುಬ್ರಹ್ಮಣ್ಯದಿಂದಲೇ ಬಸ್‌ಗಳು ಯಾತ್ರಿಕರಿಂದ ಕಿಕ್ಕಿರಿದು ಹೊರಡುವ ಕಾರಣ ಮಧ್ಯದ ನಿಲ್ದಾಣಗಳಲ್ಲಿ ಕಾಯುತ್ತಿರುವ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಬಸ್ ನಿಲ್ಲಿಸಿದರೂ ಹತ್ತಲು ಅವಕಾಶ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಮನೆ ತಲುಪಲು ತಡವಾಗುವುದರ ಜೊತೆಗೆ ಪ್ರತಿದಿನವೂ ಅನಗತ್ಯ ಮಾನಸಿಕ ಹಾಗೂ ದೈಹಿಕ ಒತ್ತಡ ಅನುಭವಿಸುವಂತಾಗಿದೆ. ಕೆಲವೊಂದು ಬಸ್‌ಗಳು ನಿರ್ವಹಣೆ ಇಲ್ಲದೇ ಅಲ್ಲಲ್ಲಿ ದಾರಿ ಮಧ್ಯೆ ಕೆಟ್ಟು ನಿಲ್ಲುತ್ತಿದೆ.


ವಿಶೇಷ ಬಸ್ ಸೇವೆ ಇರಲಿ: ಶಾಲಾ ಮಕ್ಕಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಉದ್ಯೋಗಿಗಳಿಗಾಗಿ ಬೆಳಗ್ಗೆ ಮತ್ತು ಸಂಜೆ ವಿಶೇಷ ಬಸ್ ಸೇವೆಗಳನ್ನು ಆರಂಭಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬಹುದು. ಯಾತ್ರಿಕರ ದಟ್ಟಣೆ ಹೆಚ್ಚಿರುವ ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವುದು ಇಂದಿನ ಅಗತ್ಯವಾಗಿದೆ.


ಹೆಚ್ಚಿದ ಪ್ರಯಾಣಿಕರ ಸಂಖ್ಯೆ: ಈ ಸಮಸ್ಯೆ ಕೇವಲ ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗಕ್ಕೆ ಸೀಮಿತವಾಗಿಲ್ಲ. ತಾಲೂಕಿನ ಧರ್ಮಸ್ಥಳ-ಮಂಗಳೂರು, ಪೂತ್ತೂರು-ಧರ್ಮಸ್ಥಳ ಸೇರಿದ್ದಂತೆ ಗ್ರಾಮಾಂತರ ಪ್ರದೇಶದಿಂದ ಬರುವ ಬಸ್‌ಗಳ ತುಂಬಿ ತುಳುಕುತ್ತಿದೆ. ರಾಜ್ಯದ ಅನೇಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದು, ವಿಶೇಷವಾಗಿ ಉಚಿತ ಪ್ರಯಾಣ ಸೌಲಭ್ಯ ಜಾರಿಯಾದ ಬಳಿಕ ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಸಮಗ್ರ ಅಧ್ಯಯನದ ಮೂಲಕ ಸಮಸ್ಯೆ ಹೆಚ್ಚಿರುವ ಮಾರ್ಗಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.


ಶೀಘ್ರವೇ ಪರಿಹಾರ ಒದಗಿಸಿ: ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಗಂಭೀರ ಸಮಸ್ಯೆಯತ್ತ ತಕ್ಷಣ ಗಮನಹರಿಸಿ, ವಿದ್ಯಾರ್ಥಿಗಳ ಸುರಕ್ಷತೆ, ಸಾರ್ವಜನಿಕರ ಅನುಕೂಲತೆ ಹಾಗೂ ಸ್ಥಳೀಯರ ಹಿತದೃಷ್ಟಿಯಿಂದ ಹೆಚ್ಚುವರಿ ಬಸ್‌ಗಳು, ವಿಶೇಷ ಸೇವೆಗಳು ಹಾಗೂ ಸಮಯೋಚಿತ ಸಾರಿಗೆ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯಾತ್ರಿಕರಷ್ಟೇ ಅಲ್ಲ, ಸ್ಥಳೀಯರ ಜೀವನನಾಡಿಯೂ ಆಗಿರುವುದರಿಂದ ಅವರ ಅಗತ್ಯಗಳಿಗೂ ಸಮಾನ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಬಸ್ ನಿಲ್ಲಿಸಲ್ಲ: ಬೊಳಿಯಾರು ಬಸ್ ನಿಲ್ದಾಣದಿಂದ ನಾವು ಸುಮಾರು15 ವಿದ್ಯಾರ್ಥಿಗಳು ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ನಿಡ್ಲೆ ಶಾಲೆ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದೂ ನಮ್ಮ ಬೋಳಿಯರು ಬಸ್ ನಿಲ್ದಾಣ ಬರೀ ಹೆಸರಿಗಷ್ಟೇ ನಿಲ್ದಾಣವಾಗಿದೆ. ಇಲ್ಲಿ ಕೇವಲ ಒಂದೆರಡು ಗ್ರಾಮಾಂತರ ಬಸ್ ಬಿಟ್ಟರೆ ಬೇರೆ ಸುಬ್ರಹ್ಮಣ್ಯ ಕ್ಕೆ ಹೋಗುವ ಯಾವುದೇ ಬುಸಗಳು ನಿಲ್ಲಿಸುವುದಿಲ್ಲ. ಅದರಿಂದ ನಮಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ .ಬೊಳಿಯಾರು ಭಾಗದ ವಿದ್ಯಾರ್ಥಿಗಳು

ಜನಸಂದಣಿಯಿಂದ ಬಸ್ ಚಾಲಕರಿಗೂ ಸುರಕ್ಷಿತವಾಗಿ ವಾಹನ ಚಲಾಯಿಸುವುದು ಸವಾಲಾಗಿ ಪರಿಣಮಿಸಿದೆ. ಇದರ ಜೊತೆಗೆ, ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಬಸ್ ಬೋರ್ಡ್ ಪ್ರದರ್ಶನವಾದ ತಕ್ಷಣ ಸೀಟ್‌ಗಳನ್ನು ಕಾಯ್ದಿರಿಸುವ ಉದ್ದೇಶದಿಂದ ಕೆಲವರು ಬಸ್ ಕಿಟಕಿಗಳ ಮೂಲಕ ಬ್ಯಾಗ್‌ಗಳನ್ನು ಎಸೆಯುವುದು, ಚಿಕ್ಕ ಮಕ್ಕಳನ್ನು ಕಿಟಕಿಯೊಳಗೆ ತಳ್ಳುವುದು ಮುಂತಾದ ಅಪಾಯಕಾರಿ ದೃಶ್ಯಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಗಾಯಗಳಾದರೆ ಅದರ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ಈ ಬೆಳವಣಿಗೆಗಳು ಮಕ್ಕಳಲ್ಲಿ ಭಯ ಮತ್ತು ಆತಂಕವನ್ನೂ ಉಂಟುಮಾಡುತ್ತಿವೆ.

ಅನೇಕ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಜೀವದ ಹಂಗು ತೊರೆದು ಬಸ್‌ನ ಫುಟ್‌ಬೋರ್ಡ್ನಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಸ್‌ನ ನಿಗದಿತ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿರುವುದು ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಯಾವುದೇ ಕ್ಷಣದಲ್ಲಿ ಸಂಭವಿಸಬಹುದಾದ ಸಣ್ಣ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Related posts

ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಪದ್ಮಲತಾ ಮೋಹನ್ ನಿಡ್ಲೆ ಅವರ ಕಾದಂಬರಿ ‘ಮೃತ್ಯು ಚುಂಬನ’ ಕೃತಿ ಬಿಡುಗಡೆ

Suddi Udaya

ಮಡಂತ್ಯಾರು: ರಚನಾ ಸಿಲ್ಕ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ನಾವೂರು ಕೈಕಂಬ ಪ್ರದೇಶದ ಲಾಯಿಲ- ಕಿಲ್ಲೂರು ಪಿಡ್ಲೂಡಿ ರಸ್ತೆ ಬದಿಯ ಚರಂಡಿಯಲ್ಲಿ ತುಂಬಿದ ಹೂಳು:ಚರಂಡಿ ಹೂಳು ತೆಗೆದ ಯುವ ಉದ್ಯಮಿ ಅನಿಲ್ ಎಂ.ಜೆ ನರ್ನೊಟ್ಟು : ಸಾರ್ವಜನಿಕರ ಪ್ರಶಂಸೆ

Suddi Udaya

ಮಚ್ಚಿನ: ನೆತ್ತರ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ

Suddi Udaya

ಬೆಳ್ತಂಗಡಿ ತಾ| ಕಚೇರಿಯ ನಿವೃತ್ತ ಉಪತಹಶೀಲ್ದಾರ್ ನಿಡ್ಲೆ ಚೆನ್ನಪ್ಪ ಗೌಡ ನಿಧನ

Suddi Udaya

ರಾಜ್ಯಮಟ್ಟದ ಕರಾಟೆ: ಕಾಯರ್ತಡ್ಕ ದಿವ್ಯಜ್ಯೋತಿ ಆಂ.ಮಾ. ಶಾಲೆಯ ಅಡ್ಲಿನ್ ಎಲಿಜಬೆತ್ ಜೆರಿನ್ ಗೆ ಚಿನ್ನದ ಪದಕ

Suddi Udaya
error: Content is protected !!