ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ‘ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್’ ಇವರು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದರು.
ಡನ್‌ಸ್ಟರ್ ಬಿಸಿನೆಸ್ ಸ್ಕೂಲ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ಫಿಲಿಪ್ ಥೆವೆನೋಟ್‌ರವರು ಆನ್‌ಲೈನ್ ಮೂಲಕ ಪದವಿಯನ್ನು ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾರವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನಿಸಿದರು.
ಅವಿನಾಶ್ ಗುಪ್ತಾರವರು ಮಾತಾನಾಡುತ್ತಾ ‘ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸುವ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಧನ್ಯತೆಯ ಕ್ಷಣವಾಗಿದೆ. ನಾವಿಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿಲ್ಲ. ಬದಲಾಗಿ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿ, ಅವರ ಜೀವನವನ್ನೇ ಧನ್ಯಗೊಳಿಸಿದ ಮಹೋನ್ನತ ಚೇತನವೊಂದರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಅಪರೂಪಕ್ಕೊಮ್ಮೆ ನಮಗೆ ಇಂತಹ ಅಸಾಧಾರಣ ವ್ಯಕ್ತಿಗಳು ಸಿಗುತ್ತಾರೆ. ಇವರು ನಮಗೆ ಅತ್ಯುನ್ನತವಾದ ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ, ಬದಲಾಗಿ ಮಾನವನ ಬದುಕನ್ನು ಸುಧಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿಸುತ್ತಾರೆ. ಅಂತಹ ಅಸಾಧಾರಣ ವ್ಯಕ್ತಿತ್ವವೇ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು. ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಮಾತೃಶ್ರೀಯವರು ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ.
ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೆ ರಾಜ್ಯದಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಲ್ಕು ದಶಕಗಳ ಹಿಂದೆ ‘ಜ್ಞಾನವಿಕಾಸ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದು ವಾತ್ಸಲ್ಯ, ಮಾಸಾಶನ ಮುಂತಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಜ್ಞಾನವಿಕಾಸದಿಂದಾಗಿ ಹಳ್ಳಿಯ ಮಹಿಳೆಯರಲ್ಲಿ ಮಹತ್ತರ ಬದಲಾವಣೆಯಾಗಿದೆ. ಆತ್ಮವಿಶ್ವಾಸ, ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದುದು. ಮಾತೃಶ್ರೀಯವರು ಸರ್ವ ಆದರ್ಶಗಳಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ’ ಎಂದರು.
ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.















