September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಲಿನಗೊಳ್ಳುತ್ತಿರುವ ಬಂಗಾಡಿ-ಕೊಲ್ಲಿ ಮಡಿಲು; ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

✍️ಸುದಿತ್ ಕುಂಜರ್ಪ

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ರಮಣೀಯ ಪ್ರದೇಶ, ಬಂಗಾಡಿ ಸೀಮೆಯ ಜೋಡುಕರೆ ಕಂಬಳದ ಸಾಂಪ್ರದಾಯಿಕ ಭೂಮಿ, ಜಾನುವಾರುಗಳಿಗೆ ಮೇಯುವುದಕ್ಕೆ, ದಾಹ ನೀಗಿಸುವುದಕ್ಕೆ ನದಿಯ ನಡುವೆ ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಗಾಡಿ-ಕೊಲ್ಲಿಯ ಮಡಿಲು ಮಾನವನ ಅರೆಪ್ರಜ್ಞೆತನದಿಂದ ಇಂದು ಮಲಿನಗೊಳ್ಳುತ್ತಿರುವುದು ಬೇಸರದ ಸಂಗತಿ.

ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣಗಳಾದ ಗಡಾಯಿಕಲ್ಲು(ನರಸಿಂಹಘಡ), ಬಂಡಾಜೆ, ದಿಡುಪೆ, ಎರ್ಮಯ್ ಫಾಲ್ಸ್, ಜೊತೆಗೆ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನ, ಬಂಗಾಡಿ ಅರಮನೆ, ಅಳದಂಗಡಿ ಅರಮನೆ, ವೇಣೂರು ಗೊಮ್ಮಟ ವಿಗ್ರಹ, ಇತಿಹಾಸ ಪ್ರಸಿದ್ದ ಕಾಜೂರು ದರ್ಗಾಗಳಂತಹ ವೀಕ್ಷಣಾ ಹಾಗೂ ಪ್ರಾರ್ಥನ ಮಂದಿರಗಳನ್ನು ಹೊಂದಿದ್ದು, ದಿನಂಪ್ರತಿ ಸಾವಿರಾರು ಪ್ರವಾಸಿಗರು, ಭಕ್ತವರ್ಗ ಭೇಟಿ ನೀಡುತ್ತಿರುತ್ತಾರೆ.

ಅಂತೆಯೇ ತಾಲೂಕಿನ ಚಾರಣಪಥ ನೇತ್ರಾವತಿ ಪೀಕ್ ಅಥವಾ ಜಲಪಾತಗಳಾದ ಎರ್ಮಯ್, ಕಡಮಗುಂಡಿ ವೀಕ್ಷಣೆಗೆ ಬರುವಂತಹ ಚಾರಣಿಗರು, ಪ್ರವಾಸಿಗರು, ಬೈಕ್ ರೈಡರ್ ಗಳು ಪಕ್ಕದ ಬಂಗಾಡಿ-ಕೊಲ್ಲಿಯ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದಕ್ಕೆ ಬರುವ ಸಂದರ್ಭ ಆಹಾರ ಪದಾರ್ಥಗಳ ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲೆ ಬಿಸಾಕಿ ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಕೆಲವೊಂದು ಪುಂಡಪೋಕರಿಗಳು ಕೊಲ್ಲಿಯ ತಟದಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿ ಉಪಯೋಗಿಸಿದ ಮದ್ಯ ಬಾಟಲಿಗಳು ಅಲ್ಲೆ ಹಾಕಿ ಜೊತೆಗೆ ಅವುಗಳನ್ನು ಪುಡಿಗೈದ ಪರಿಣಾಮವಾಗಿ ಇಂದು ಬಂಗಾಡಿ-ಕೊಲ್ಲಿಯ ಮಡಿಲೇ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಅಲ್ಲಿಯ ಗ್ರಾಮಸ್ಥರು ಅಂತಹ ಕಿಡಿಗೇಡಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಸಾಂಪ್ರದಾಯಿಕ ಜೋಡುಕರೆ ಕಂಬಳದ ಪುಣ್ಯಭೂಮಿ:
ಬಂಗಾಡಿ-ಕೊಲ್ಲಿ ಎಂದಾಗ ನೆನಪಾಗುವುದೇ ಇಲ್ಲಿಯ ಸಾಂಪ್ರದಾಯಿಕ ಜೋಡುಕರೆ ಕಂಬಳ. ಬಂಗಾಡಿ ಸೀಮೆಗೆ ಒಳಪಟ್ಟಂತಹ ಬಂಗಾಡಿ-ಕೊಲ್ಲಿಯ ಕಂಬಳದ ಕರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಕಂಬಳ ಆಯೋಜನೆ ಆಗುತ್ತಿದ್ದು, ನೂರಾರು ಜತೆ ಕೋಣಗಳು ಭಾಗವಹಿಸುತ್ತಿದೆ. ನದಿಯ ತೀರದಲ್ಲಿ ನಡೆಯುವ ಕಂಬಳವನ್ನು ನೋಡುವುದೇ ಆನಂದವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಕಂಬಳವನ್ನು ವೀಕ್ಷಿಸುವುದಕ್ಕಾಗಿ ಬಂದು ಸೇರುತ್ತಾರೆ. ಇಂತಹ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವವನ್ನು ಹೊಂದಿದ ಭೂಮಿ ಮಲೀನಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ವಿಷಾದ ವ್ಯಕ್ತ ಪಡಿಸಿದ್ದಾರೆ.

ಸೂಚನಾ ಫಲಕ ಅವಶ್ಯಕ:
ಪ್ರಕೃತಿ ರಮಣೀಯ ಪ್ರದೇಶವಾದ ಕೊಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಕಂಡಾಗ ಬೇಸರವಾಗುತ್ತಿದೆ. ಕೊಲ್ಲಿಯ ನದಿಯ ತೀರದಲ್ಲಿ ತಂಪಾದ ಗಾಳಿಯ ಜೊತೆಗೆ ಪ್ರಕೃತಿ ಸೌಂದರ್ಯವನ್ನು ನೋಡುವುದಕ್ಕೆ ಅನೇಕ ಜನರು ಬರುತ್ತಾರೆ. ಬಂದವರಲ್ಲಿ ಕೆಲವರು ಈ ರೀತಿಯ ಕೆಲಸ ಮಾಡುವುದರಿಂದ ಈ ಪರಿಸರ ಹಾಲಾಗುತ್ತಿದೆ. ಸಂಬಂಧಪಟ್ಟಂತಹ ಇಲಾಖೆ ಅಥವಾ ಸ್ಥಳೀಯ ಆಡಳಿತ ಸೂಚನಾ ಫಲಕಗಳನ್ನು ಹಾಕುವುದು ಅವಶ್ಯಕ.
ಸಿರಾಜ್ ಸ್ಥಳೀಯರು

Related posts

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪದವಿ ಪ್ರದಾನ ಸಮಾರಂಭ

Suddi Udaya

ಇಂದಬೆಟ್ಟು ಗ್ರಾ.ಪಂ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ದೂರು: ಎರಡು ದಿನಗಳಲ್ಲಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಕಡತ ಪರಿಶೀಲನೆ-ಸ್ಥಳ ತನಿಖೆ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಾಟಿ ನೆಡುವ ಪ್ರಾತ್ಯಕ್ಷಿಕೆ

Suddi Udaya

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕದಿಂದ ಸಾರಿಗೆ ಇಲಾಖೆಯ ನಿರ್ಲಕ್ಷತೆಯಿ೦ದ ನಡೆದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ರಸ್ತೆ ತಡೆ ಮಾಡಿ ಪ್ರತಿಭಟನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಿಜೃಂಭಣೆಯ ನವರಾತ್ರಿ ಉತ್ಸವ ಸಂಪನ್ನ

Suddi Udaya
error: Content is protected !!