30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಸೈನಾಥಾನ್ 2026 – ‘ಎ ರನ್ ಟು ಹಾನರ್ ಅವರ್ ಹೀರೋಸ್’;

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್.ಸಿ.ಸಿ ವಿಭಾಗದ ವತಿಯಿಂದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯೂತ್ ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ ಸೈನಾಥಾನ್ 2026 A Run to Honour Our Heroes ಎಂಬ ಧ್ಯೇಯವಾಕ್ಯದೊಂದಿಗೆ ಬೃಹತ್ ಓಟ ಜರುಗಿತು.

ಕಾರ್ಯಕ್ರಮವನ್ನು ಭಾರತೀಯ ಭೂ ಸೇನೆಯ ನಿವೃತ್ತ ಸಾರ್ಜೆಂಟ್ ರವಿಪ್ರಸಾದ್ ಉದ್ಘಾಟಿಸಿ ಮಾತನಾಡಿ, ಸೈನಿಕ ಜೀವನವು ಶಿಸ್ತು, ಸಮಯಪಾಲನೆ, ಧೈರ್ಯ, ಆತ್ಮವಿಶ್ವಾಸ ಹಾಗೂ ದೇಶಭಕ್ತಿಯ ಮೇಲೆ ನಿಂತಿದೆ. ದೇಶದ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ವೈಯಕ್ತಿಕ ಸುಖ, ಕುಟುಂಬ ಹಾಗೂ ಅನೇಕ ಸವಾಲುಗಳನ್ನು ಬದಿಗೊತ್ತಿ ರಾಷ್ಟ್ರದ ಹಿತಕ್ಕಾಗಿ ಸೇವೆ ಸಲ್ಲಿಸುವುದು ಸೈನಿಕರ ಕರ್ತವ್ಯ. ಯುವಜನರು ದೇಶದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಶಿಸ್ತು, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು.

ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವ ಅಗತ್ಯ. ಯಾವುದೇ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ದೇಶದ ಏಕತೆ, ಅಖಂಡತೆ ಮತ್ತು ಶಾಂತಿಯನ್ನು ಕಾಪಾಡುವುದು ಕೇವಲ ಸೈನಿಕರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ದೇಶದ ಗಡಿ ಹಾಗೂ ನಾಗರಿಕರ ಸುರಕ್ಷತೆಗಾಗಿ ಸೈನಿಕರು ಎದುರಿಸುವ ಸವಾಲುಗಳು, ತ್ಯಾಗ ಮತ್ತು ಕರ್ತವ್ಯ ಅಪಾರ. ಸೈನಿಕರ ಜೀವನದ ಅನುಭವಗಳು ಹಾಗೂ ದೇಶಸೇವೆಯ ಕುರಿತಾದ ಅವರ ಮಾತುಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಕರ್ತವ್ಯಪ್ರಜ್ಞೆ ಮತ್ತು ರಾಷ್ಟ್ರಸೇವೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸಬೇಕು.ವಿದ್ಯಾರ್ಥಿಗಳು ದೇಶ ಮೊದಲು, ಕರ್ತವ್ಯಕ್ಕೆ ಆದ್ಯತೆ ಮತ್ತು ಸ್ವಾರ್ಥಕ್ಕಿಂತ ರಾಷ್ಟ್ರದ ಹಿತ ಮುಖ್ಯ ಎಂಬ ಮಹತ್ವವನ್ನು ಸಾರಬೇಕು.ದೇಶದ ಅಭಿವೃದ್ಧಿಗೆ ಯುವಜನರು ತಮ್ಮ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಸೈನಾಥಾನ್ ಓಟವು ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಆವರಣದಿಂದ ಆರಂಭಗೊಂಡು ಉಜಿರೆ ಮಹಾ ದ್ವಾರದವರೆಗೆ ಸಾಗಿತು. ಅಲ್ಲಿಂದ ಹಿಂದಿರುಗಿ ಎಸ್.ಡಿ.ಎಂ ಕಾಲೇಜಿನ ಆವರಣದಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಬೃಹತ್ ಕಾರ್ಯಕ್ರಮಕ್ಕೆ ಗೌರವಪೂರ್ಣ ಸಮಾರೋಪವನ್ನು ನೀಡಲಾಯಿತು. ದೇಶದ ಗಡಿಗಳನ್ನು ಕಾಯುವ ವೀರ ಯೋಧರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸುವುದರ ಜೊತೆಗೆ, ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸೇವಾ ಮನೋಭಾವ ಮತ್ತು ರಾಷ್ಟ್ರದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವಲ್ಲಿ ಓಟ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಕುಲಸಚಿವ ಪ್ರೊ. ಶ್ರೀಧರ ಎನ್. ಭಟ್ಟ, IQAC ಸಂಯೋಜಕ ಗಜಾನನ ಆರ್. ಭಟ್, ಸ್ನಾತಕೋತ್ತರ ಅಧ್ಯಯನಗಳ ಡೀನ್ ಡಾ. ಸೌಮ್ಯ ಬಿ.ಪಿ., NSS ಯೋಜನಾಧಿಕಾರಿ ಡಾ. ಸುಧೀರ್ ಕೆ.ವಿ. ಹಾಗೂ ಡಾ. ಮಾಲಿನಿ ಅಂಚನ್, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್., ಎನ್.ಸಿ.ಸಿಯ ANO ಸಬ್ ಲೆಫ್ಟಿನೆಂಟ್ ಹರೀಶ್ ಶೆಟ್ಟಿ, NCC ಆರ್ಮಿ CTO ಶೋಭಾ, ಯುವ ರೆಡ್‌ಕ್ರಾಸ್ ಸಂಯೋಜಕಿ ಕುಮಾರಿ ಮಂಜುಶ್ರೀ ಕೆ., ರೋವರ್ಸ್ ಮತ್ತು ರೇಂಜರ್ಸ್ ಸಂಯೋಜಕ ಆರ್‌ಎಸ್‌ಎಲ್ ಪ್ರಸಾದ್ ಕುಮಾರ್ ಹಾಗೂ ಆರ್‌ಎಲ್ ಡಾ. ಘನವಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸಂಯೋಜಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರು ದೇಶಭಕ್ತಿ ಗೀತೆ ಹಾಡಿದರು. ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ಸ್ವಾಗತಿಸಿದರು. ಕಾಲೇಜಿನ ರೆಡ್ ಕ್ರಾಸ್ ವಿಭಾಗದ ಸಂಯೋಜಕಿ ಮಂಜುಶ್ರೀ ನಿರೂಪಿಸಿದರು. Sub Lt. ಹರೀಶ್ ಶೆಟ್ಟಿ (ANO, NCC) ವಂದಿಸಿದರು.

Related posts

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಚಿಬಿದ್ರೆ: ಪೆರಿಯಡ್ಕ ಮಾಲ್ನ ನಿವಾಸಿ ಬಾಲಣ್ಣ ಗೌಡ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಭಿಯಂತರರ ದಿನಾಚರಣೆ

Suddi Udaya

ಕನ್ಯಾಡಿ || : ಡಾ. ಡಿ.ವೀರೇಂದ್ರ ಹೆಗ್ಗಡೆ ಯವರಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರ ಉದ್ಘಾಟನೆ

Suddi Udaya
error: Content is protected !!