September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಅಂತರಾಷ್ಟ್ರೀಯ ಶೈಕ್ಷಣಿಕ – ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ; ಎಸ್.ಡಿ.ಎಂ ವಿವಿಧ ಸಂಸ್ಥೆಗಳಿಗೆ ಜಪಾನ್ ತಂಡ ಭೇಟಿ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮತ್ತು ಜಪಾನ್ ದೇಶದ ಕಮ್ಯುನಿಟಿ ವರ್ಕ್ ಬಿಯಾಂಡ್ ಬಾರ್ಡರ್ಸ್ ಸಂಸ್ಥೆಯ ಸಹಯೋಗದೊಂದಿಗೆ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿಗೆ ಜಪಾನ್ ದೇಶದ ಆರು ಜನರ ತಂಡವು ಭೇಟಿ ನೀಡಿ ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಪೈಕಿ ಜಪಾನ್ ದೇಶದ ಇಬ್ಬರು ವಿದ್ಯಾರ್ಥಿಗಳು ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಮುಂದಿನ ಒಂದು ತಿಂಗಳ ಕಾಲ ವಿಶೇಷ ಅಧ್ಯಯನವನ್ನು ಮಾಡಲಿದ್ದಾರೆ.

ಈ ಹಿಂದೆ ಉಜಿರೆಯ ಎಸ್‌.ಡಿ.ಎಂ ಕಾಲೇಜಿನ ಓರ್ವ ಸಹಾಯಕ ಪ್ರಾಧ್ಯಾಪಕಿ ಮತ್ತು ಇಬ್ಬರು ವಿದ್ಯಾರ್ಥಿನಿಯರನ್ನು ಒಳಗೊಂಡ ತಂಡವು ಅಂತರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಹಾಗೂ ದಕ್ಷಿಣ ಭಾರತದ ಸಂಸ್ಕೃತಿ ಪರಂಪರೆಗಳನ್ನು ಪ್ರದರ್ಶಿಸುವ ಮೂಲಕ ಕಲಾಸಕ್ತ ವಿದೇಶಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿ ಗಮನ ಸೆಳೆದಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಪಕಿ ಮಾಲಿನಿ ಅಂಚನ್, ವಿದ್ಯಾರ್ಥಿಗಳಾದ ಸಂಜನಾ ಮತ್ತು ಸಿಂಚನಾ ಜಪಾನ್ ದೇಶದ ವಿವಿಧ ವೇದಿಕೆಗಳಲ್ಲಿ ಕರ್ನಾಟಕದ ಯಕ್ಷಗಾನ ಕಲೆ ಸೇರಿದಂತೆ ಇಲ್ಲಿನ ವಿವಿಧ ಸಂಸ್ಕೃತಿ ಹಾಗೂ ಜೀವನ ಪದ್ಧತಿಗಳನ್ನು ಪರಿಚಯಿಸುವ ಮೂಲಕ 11 ದಿನಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದರ ಮುಂದುವರಿದ ಭಾಗವಾಗಿ ಭಾರತಕ್ಕೆ ಆಗಮಿಸಿದ ಜಪಾನ್ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಾಧಿಕಾರಿ ಡಾ. ಡಿ.‌ ವೀರೇಂದ್ರ ಹೆಗ್ಗಡೆ ಹಾಗು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರೊಂದಿಗೆ ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಚಾರದ ಕುರಿತು ಚರ್ಚಿಸಿದರು. ಬಳಿಕ ಹರ್ಷೇಂದ್ರ ಕುಮಾರ್ ರವರನ್ನು ಭೇಟಿ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯವೈಖರಿಯ ಕುರಿತು ಚರ್ಚಿಸಿದರು. ಬಳಿಕ ಕ್ಷೇತ್ರದ ಅನ್ನಪೂರ್ಣ ಛತ್ರ, ಮಂಜೂಷ ಮ್ಯುಸಿಯಂ , ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ಧರ್ಮಸ್ಥಳದ ಸೇವಾ ಚಟುವಟಿಕೆ ಹಾಗೂ ಯೋಜನೆಗಳ ಕುರಿತು ಅಪಾರ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಆಗಮಿಸಿದ ತಂಡವನ್ನು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಭಾರತದ ಕಮ್ಯುನಿಟಿ ವರ್ಕ್ ಬಿಯಾಂಡ್ ಬಾರ್ಡರ್ಸ್ ಸಂಸ್ಥೆಯ ಕನ್ಸಲ್ಟೆಂಟ್ ಮನೋರಮಾ ಭಟ್ , ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.

ಅದೇ ದಿನ ಅಪರಾಹ್ನ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆದ ಔಪಚಾರಿಕ ಸಭೆಯಲ್ಲಿ ಜಪಾನ್ ಸದಸ್ಯರನ್ನು ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವಾ ಚಟುವಟಿಕೆ ಹಾಗು ಸಾಮಾಜಿಕ ಕಾರ್ಯಕ್ರಮಗಳ ಕುರಿತು ಸಿಇಓ ಪೂರನ್ ವರ್ಮ ಪರಿಚಯಿಸಿದರು. ಬಳಿಕ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಕಾಲೇಜಿನ ಕುರಿತಾದ ಮಾಹಿತಿಯನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಮುಖರು ಉಪಸ್ಥಿತರಿದ್ದರು. ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋ, ಗ್ರಂಥಾಲಯ, ಕಲಾಕೇಂದ್ರ ಹಾಗು ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆಯೊಳಗಿನ ಸವಲತ್ತು ಹಾಗು ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನವನ್ನು ಕಂಡು ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು. ಈ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಯೋಜನೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯೊಂದಿಗೆ ಅಧಿಕೃತ ಒಡಂಬಡಿಕೆಯ ಮೂಲಕ ಮುಂದುವರಿಸಲು ತಿಳಿಸಿದರು.

ಯೋಜನೆಯ ಭಾಗವಾಗಿ ಜಪಾನ್ ದೇಶದ ವಿದ್ಯಾರ್ಥಿಗಳಾದ ಗೊಟೊ ರೈಯೋಹೆ ಮತ್ತು ಇಕೆಡಾ ಅಕಾರಿ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಒಂದು ತಿಂಗಳುಗಳ ಕಾಲ ವಿಶೇಷ ಅಧ್ಯಯನದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಯೋಜನೆಯ ನೇತೃತ್ವವನ್ನು ಕಮ್ಯುನಿಟಿ ವರ್ಕ್ ಬಿಯಾಂಡ್ ಬಾರ್ಡರ್ಸ್ ಸಂಸ್ಥೆಯ ಕನ್ಸಲ್ಟೆಂಟ್ ಮನೋರಮಾ ಭಟ್ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ವಹಿಸಿದ್ದಾರೆ.

ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆಯನ್ನು ರೂಪಿಸುವಲ್ಲಿ ಅಂತರರಾಷ್ಟ್ರೀಯ ಶೈಕ್ಷಣಿಕ ಮತ್ತು ಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಂಸ್ಕೃತಿಗಳನ್ನು ಅನುಭವಿಸಲು ಅವಕಾಶವನ್ನು ನೀಡುತ್ತವೆ, ಜಾಗತಿಕ ತಿಳುವಳಿಕೆ ಮತ್ತು ಹೊಸ ಅನುಭವವನ್ನು ನೀಡುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಇಂತಹ ಕಾರ್ಯಕ್ರಮಗಳಿಗೆ ಅಪಾರ ಪ್ರೋತ್ಸಾಹ ಮತ್ತು ಸಹಕಾರವನ್ನು ನಿರಂತರವಾಗಿ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ.
– ಪೂರನ್ ವರ್ಮ, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ

” ನಾವು ಈ ಭಾರತವನ್ನು ಕಂಡು ಧನ್ಯರಾದೆವು. ಇಲ್ಲಿನ ಆತೀಥ್ಯ, ಕಲೆ ಸಂಸ್ಕೃತಿ,ಆಚರಣೆ,ಊಟ ಉಪಚಾರ, ಜನರು ಎಲ್ಲವು ಸೋಜಿಗ. ಇಲ್ಲಿ ನಮಗೆ ನೀಡಿರುವ ಸತ್ಕಾರಕ್ಕೆ ನಾವು ಸದಾ ಈ ನೆಲದ ಯಾವುದೇ ಕಾರ್ಯಗಳಿಗೆ ಸ್ವಯಂ ಸೇವಕರಾಗಿ ಬರಲು ಸಿದ್ಧ. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಂತರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹೊಸ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತದೆ.”

  -  ಪ್ರೋ. ಮಾಸ ಕಟಾಒಕ , ಜಪಾನ್ ತಂಡದ ಸಂಯೋಜಕ

Related posts

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕರ್ತವ್ಯದ ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ ಆರೋಪ: ಇಬ್ಬರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ರ ಪ್ರಶಸ್ತಿಗೆ ಭಾಜನರಾದ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಯುವದಿನಾಚರಣೆ

Suddi Udaya

ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿ ಸಾತ್ವಿಕಾ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ

Suddi Udaya

ಬೆಳ್ತಂಗಡಿ: ರೆಂಕೆದಗುತ್ತುನಲ್ಲಿ ಆವರಣ ಗೋಡೆ ಬಿದ್ದು ಹಾನಿ

Suddi Udaya
error: Content is protected !!