ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವಾಣಿಜ್ಯ ನಗರದ ಎರಡು ಗ್ರಾಮ ಪಂಚಾಯತ್ ಸೇರಿದ್ದಂತೆ ದಕ್ಷಿಣ ಜಿಲ್ಲೆಯ ಏಳು ಗ್ರಾಮ ಪಂಚಾಯತ್ ಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸುತ್ತಿರುವ ಬಗ್ಗೆ ಸೆ. 8 ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಗೆ ಲೋಕಾ ಅಧಿಕಾರಿಗಳು ಬೆಳಗ್ಗೆ 10 ಗಂಟೆ ವೇಳೆಗೆ ಧಿಡೀರ್ ಭೇಟಿ ಕಡತಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತ ಕೇಂದ್ರ ಕಛೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ, ತನಿಖೆಯ ಮುಂದುವರಿದ ಭಾಗವಾಗಿ ಲೋಕಾ ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಉಡುಪಿ ಜಿಲ್ಲೆಯ ಲೋಕಾಯುಕ್ತ ಇನ್ ಸ್ಪೇಕ್ಟರ್ ಮಂಜುನಾಥ್ ಶಂಕರಹಳ್ಳಿ ನೇತೃತ್ವದ ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ಆದರ್ಶ, ಅರುಣ್ ಕುಮಾರ್ ಸಹಿತ ಮತ್ತಿತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಸಂಜೆ ತನಕ ಮುಂದುವರಿಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು, ಅಡ್ಯಾರ್ ಗ್ರಾಮ ಪಂಚಾಯತ್ ,ಬೆಳ್ತಂಗಡಿ ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರ್ ಗ್ರಾಮ ಪಂಚಾಯತ್ ಸೇರಿ ಒಟ್ಟು ಏಳು ಗ್ರಾಮ ಪಂಚಾಯತ್ ಗಳಿಗೆ ಕಾರವಾರ, ಉಡುಪಿ, ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.












