
ಮಂಗಳೂರು: ಸಹಕಾರಿ ರಂಗದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ತ್ವರಿತಗತಿಯಿಂದ ಮುನ್ನಡೆಯುತ್ತಿರುವ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ 39,86,995.91 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ.ಈ ಬಾರಿ ಸಂಸ್ಥೆಯ ಸದಸ್ಯರಿಗೆ ಶೇ.12 ಡಿವಿಡೆಂಟ್ ನೀಡಲಾಗುವುದು. ಸಂಸ್ಥೆಯ ಒಟ್ಟು ವ್ಯವಹಾರ 350 ಕೋಟಿ ರೂಗಳಾಗಿದ್ದು, 2026-27ನೇ ಸಾಲಲ್ಲಿ ಇದನ್ನು 500ಕೋಟಿ ರೂಗಳಿಗೆ ತಲುಪಿಸುವ ಗುರಿಯಿದೆ ಎಂದು ಶ್ರೀ ಪೂರ್ಣಾನಂದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ನುಡಿದರು.
ಪ್ರಸ್ತುತ ಸಾಲಲ್ಲಿ ಸಂಸ್ಥೆಯ ಠೇವಣಿ 37,03,65,227 ಕೋಟಿ ರೂಗಳು. 2026-27 ರಲ್ಲಿ ಇದನ್ನು 50ಕೋಟಿ ರೂಗಳಿಗೆ ಹಾಗೂ ಪಾಲು ಬಂಡವಾಳವನ್ನು 1ಕೋಟಿ ರೂ.ಗೆ ತಲುಪಿಸುವುದು ಪೂರ್ಣಾನಂದದ ಗುರಿ. ಸಹಕಾರಿಯ ಹಿತದೃಷ್ಟಿಯಿಂದ ಅಡಮಾನ ಸಾಲ, ಚಿನ್ನಾಭರಣ ಸಾಲ ಇತ್ಯಾದಿ ಭದ್ರತೆಯುಕ್ತಸಾಲಗಳಿಗೆ ಆದ್ಯತೆ ನೀಡಲಾಗುವುದು. ಸಂಸ್ಥೆಯ ಇವೆಲ್ಲ ಗುರಿಗಳ ಸಾಕಾರಕ್ಕೆ ಸದಸ್ಯರು ಸಹಕರಿಸಬೇಕೆಂದು ಗಣೇಶ್ ಶೆಣೈ ಕೋರಿದರು.

ಶ್ರೀ ಪೂರ್ಣಾನಂದ ಸಹಕಾರಿಯ 2025-26ನೇ ಸಾಲಿನ 24ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ನಗರದ ಮಿನಿ ವಿಧಾನಸೌದ ಬಳಿಯ ಎನ್‌ಜಿಓ ಕಟ್ಟಡದಲ್ಲಿ ಸೆ.6ರಂದು ಮಹಾಸಭೆ ನಡೆಯಿತು.
ಶ್ರೀ ಪೂರ್ಣಾನಂದದ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ಮೋಹನ್ ನಾಯಕ್, ಹರಿಶ್ಚಂದ್ರ ಪ್ರಭು, ಸದಾನಂದ ಪ್ರಭು, ರವೀಂದ್ರ ಪ್ರಭು, ಜಗದೀಶ್ ಶೆಣೈ, ಅರವಿಂದ ಕುಮಾರ್ ಶೆಟ್ಟಿ, ಶ್ರೀಮತಿ ಗೀತಾ ರತ್ನಾಕರ್, ವಾಸುದೇವ , ಸಂಸ್ಥೆಯ ಕೇಂದ್ರ ಕಚೇರಿ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಅನಿತಾ, ಲೆಕ್ಕ ಪರಿಶೋಧಕರಾದ ಪಿ.ನರೇಂದ್ರ ಪೈ ಉಪಸ್ಥಿತರಿದ್ದರು. ಶ್ರೀ ಪೂರ್ಣಾನಂದ ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ, ಸಂಸ್ಥೆಯ ಬಿಜೈ ಶಾಖಾ ವ್ಯವಸ್ಥಾಪಕಿ ಶಶಿಕಲಾ ವಂದಿಸಿದರು.
ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹೃಷಿಕೇಶ್ ಕುಲಾಲ್ ಮತ್ತು ಕೇಂದ್ರ ಕಚೇರಿ ಎಕ್ಸಿಕ್ಯೂಟಿವ್ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಬಾಲ ಪ್ರತಿಭೆ ಆರಾಧ್ಯ ನಾಯಕ್ ಅವರಿಂದ ಗಾಂಧಾರ ವಿದ್ಯೆಯ ಪ್ರದರ್ಶನ ನಡೆಯಿತು.
ಗಾಂಧಾರ ವಿದ್ಯೆಯಲ್ಲಿ ನಿಸ್ಸೀಮ ಪುಟಾಣಿ ಪ್ರತಿಭೆ
ಕಾರ್ಯಕ್ರಮದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿದ್ದರೂ, ಬರೇ ಸ್ಪರ್ಶದ ಮೂಲಕ ಯಾವುದೇ ವಸ್ತುಗಳ ಬಣ್ಣವನ್ನು ಪಟಪಟನೆ ಉಸುರುವ ಪುಟಾಣಿ ಪ್ರತಿಭೆ, ಪೂರ್ಣಾನಂದದ ನಿರ್ದೇಶಕ ಮೋಹನ್ ನಾಯಕ್ ಅವರ ಮೊಮ್ಮಗಳು ಆರಾಧ್ಯ ನಾಯಕ್ ಹಾಗೂ ಚಿತ್ರಕಲೆಯಲ್ಲಿ ಅಪೂರ್ವ ಪ್ರತಿಭೆ ಹೊಂದಿರುವ ವಿಕ್ರಮ್ ಶೆಣೈ ಅನುಪಸ್ಥಿತಿಯಲ್ಲಿ ಅವರ ಸಹೋದರ ವಿವೇಕ್ ಶೆಣೈ ಗೌರವ ಪುರಸ್ಕಾರ ಪಡೆದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿರುವ ಹಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಅ.28 ರಂದು ರಜತ ಮಹೋತ್ಸವ ಗೌಜಿ
ಶ್ರೀ ಪೂರ್ಣಾನಂದ ಸಂಸ್ಥೆಗೆ ಅ.28ರಂದು ರಜತ ಮಹೋತ್ಸವ ಉದ್ಘಾಟನಾ ಗೌಜಿ. ರಜತ ಮಹೋತ್ಸವದ ಸ್ಮಾರಕ ಸ್ವಂತ ಕಟ್ಟಡ ಹೊಂದುವುದು ಸಂಸ್ಥೆಯ ಆಡಳಿತ ಮಂಡಳಿಯ ಅಭಿಲಾಷೆ. ರಜತ ಮಹೋತ್ಸವದಂಗ ಸ್ವಚ್ಛತಾ ಆಂದೋಲನ ಸಹಿತ ಹತ್ತು ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದು ಅಧ್ಯಕ್ಷ ಶೆಣೈ ನುಡಿದರು.
ಹಿರಿಯ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ
ಶ್ರೀ ಪೂರ್ಣಾನಂದದ ಹಿರಿಯ ಸದಸ್ಯರಾದ ರಾಮಚಂದ್ರ ಭಂಡಾರಿ, ಕೇಶವ ಪ್ರಭು, ಶಾಂತಾರಾಮ ರಾವ್, ಹಿರಿಯ ವಕೀಲ ಪುರುಷೋತ್ತಮ ಭಟ್ ಇವರನ್ನು ಇದೇ ಸಂದರ್ಭ ಗೌರವಿಸಲಾಯಿತು. ಹಿರಿಯ ಸದಸ್ಯರಾದ ನಾರಾಯಣ ಮಾಸ್ಟರ್ ಹಾಗೂ ಆತ್ಮರಾಂ ಪಾಟೀಲ್ ಸನ್ಮಾನ ನೆರವೇರಿಸಿದರು.












