ಉಜಿರೆ: ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಸಾಧನೆಯ ವಿವರಗಳನ್ನು ಹಂಚಿಕೊಂಡರು.
ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಥಮ್ ವಿ. ಶೆಟ್ಟಿ ರಾಯಚೂರಿನ ಫೆಡರಲ್ ಪಬ್ಲಿಕ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ನಡೆದ ಕ್ಲಸ್ಟರ್-VIII ಅಥ್ಲೆಟಿಕ್ಸ್-2026ರ ಅಂಡರ್-14 ಬಾಲಕರ ಶಾಟ್‌ಪುಟ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದು ಬೆಳ್ಳಿ ಪದಕ ಗಳಿಸಿದ್ದು, ಈ ಸಾಧನೆಯ ಮೂಲಕ ಪಂಜಾಬ್‌ನ ಪಟಿಯಾಲಾದಲ್ಲಿ ಅ. 15ರಿಂದ 20ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಹಾಗೂ ಆಳ್ವಾಸ್ ಸೆಂಟ್ರಲ್ ಸ್ಕೂಲ್, ಮೂಡುಬಿದಿರೆಯಲ್ಲಿ ಸೆ. 25ರಂದು ನಡೆದ AICS ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ಓಟ ಸ್ಪರ್ಧೆ-2026ರಲ್ಲಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಅಂಡರ್-17 ಬಾಲಕಿಯರ 4 ಕಿ.ಮೀ. ಓಟದಲ್ಲಿ 10ನೇ ತರಗತಿಯ ನಿಶಾ ತೃತೀಯ ಸ್ಥಾನ ಪಡೆದರೆ, 9ನೇ ತರಗತಿಯ ತ್ರಿಶಾ ಐದನೇ ಸ್ಥಾನ ಗಳಿಸಿದರು. ಅಂಡರ್-14 ಬಾಲಕಿಯರ 3 ಕಿ.ಮೀ. ಓಟದಲ್ಲಿ 8ನೇ ತರಗತಿಯ ನಿಯತಿ ಐದನೇ ಸ್ಥಾನ ಪಡೆದು, ಅಂಡರ್-14 ಬಾಲಕರ 4 ಕಿ.ಮೀ. ಓಟದಲ್ಲಿ 8ನೇ ತರಗತಿಯ ಸ್ವಯಂ ಗೌಡ ಅವರು ಹತ್ತನೇ ಸ್ಥಾನ ಗಳಿಸಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಜಮ್ಮ ತರಬೇತಿ ನೀಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಡಿ. ಹರ್ಷೇಂದ್ರ ಕುಮಾರ್ ಅವರು, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಪ್ರೋತ್ಸಾಹಿಸಿ ಶುಭ ಹಾರೈಸಿದರು.












