24.2 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ.ಜಾತಿ ಘಟಕದ ಜಂಟಿ ಪತ್ರಿಕಾಗೋಷ್ಠಿ : ಡಿಸಿ ಮನ್ನಾ ಭೂಮಿಗೆ ಶೀಘ್ರ ಮುಕ್ತಿ: ಸಚಿವ ಸಂಪುಟದಲ್ಲಿ ನಿರ್ಧಾರಕ್ಕೆ ಭರವಸೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 35 ವರ್ಷಗಳಿಂದ ಬಾಕಿ ಉಳಿದಿರುವ ಡಿಸಿ ಮನ್ನಾ ಭೂಮಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅಗತ್ಯ ಅನುಮೋದನೆ ಪಡೆದು ಮಂಜೂರಾತಿಗೆ ಸರ್ಕಾರದ ಆದೇಶ ಹೊರಡಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಬಿ.ಕೆ. ವಸಂತ ಹೇಳಿದರು.

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಭೂರಹಿತ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಡಿಸಿ ಮನ್ನಾ ಭೂಮಿ ಮಂಜೂರು ಮಾಡಬೇಕೆಂಬ ಬೇಡಿಕೆಗೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಧರಣಿ, ಪ್ರತಿಭಟನೆ ಸೇರಿದಂತೆ ವಿವಿಧ ಹಂತದ ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.

2017ರಲ್ಲಿ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ಒಗ್ಗೂಡಿ ‘ದಲಿತ ಸಂಘಟನೆಗಳ ಸಮನ್ವಯ ಸಮಿತಿ’ ರಚಿಸಿಕೊಂಡು, ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಭೂ ಹೋರಾಟ ನಡೆಸಿದ್ದವು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಭೂಮಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿತ್ತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ತಾಂತ್ರಿಕ ಹಾಗೂ ಕಾನೂನು ತೊಡಕುಗಳಿಂದ ಸಮಸ್ಯೆ ಮುಂದುವರಿದಿತ್ತು ಎಂದು ಅವರು ವಿವರಿಸಿದರು.ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯ ಮುಖಂಡರು ಮಾಜಿ ಸಚಿವ ಬಿ. ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಮನವರಿಕೆ ಮಾಡಿದ್ದರು. ಈ ನಾಯಕರು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೂ ವಿಷಯವನ್ನು ತಂದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಅಕ್ಟೋಬರ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಸಮುದಾಯದ ಮುಖಂಡರನ್ನು ಬೆಂಗಳೂರಿನ ವಿಧಾನಸೌಧಕ್ಕೆ ಆಹ್ವಾನಿಸಿ ಕಂದಾಯ ಸಚಿವರು ಸಭೆ ನಡೆಸಿದರು.

ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಇರುವ ಕಾನೂನು ಹಾಗೂ ತಾಂತ್ರಿಕ ತೊಡಕುಗಳ ಕುರಿತು ಚರ್ಚಿಸಲಾಯಿತು.ತೊಡಕುಗಳನ್ನು ನಿವಾರಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ, ಅಗತ್ಯ ಅನುಮೋದನೆ ಪಡೆದು ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಸರ್ಕಾರದ ಆದೇಶ ಹೊರಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ, ಮಂಗಳೂರಿಗೆ ಆಗಮಿಸಿ ಅರ್ಹ ಭೂರಹಿತ ಪರಿಶಿಷ್ಟ ಫಲಾನುಭವಿಗಳಿಗೆ ಖುದ್ದಾಗಿ ಹಕ್ಕುಪತ್ರ ವಿತರಿಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ವಸಂತ ತಿಳಿಸಿದರು.

ಉಸ್ತುವಾರಿ ಸಚಿವರಿಂದಲೂ ಭರವಸೆ: ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಸಮಸ್ಯೆ ಕುರಿತು ಚರ್ಚಿಸಿದರು. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗದಿರುವುದಕ್ಕೆ ತಾಂತ್ರಿಕ ಕಾರಣಗಳಿವೆ. ಈ ಕುರಿತು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎಂದು ಅವರು ತಿಳಿಸಿರುವುದಾಗಿ ವಸಂತ ಹೇಳಿದರು.

ದಶಕಗಳಿಂದ ಭೂಮಿಗಾಗಿ ಕಾಯುತ್ತಿರುವ ಅರ್ಹ ಭೂರಹಿತ ಪರಿಶಿಷ್ಟ ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ವಿತರಿಸುವ ಮೂಲಕ ಸಮಸ್ಯೆಗೆ ಅಂತಿಮ ಪರಿಹಾರ ಕಲ್ಪಿಸಬೇಕು ಎಂದು ಸಮನ್ವಯ ಸಮಿತಿ ಒತ್ತಾಯಿಸಿದೆ. ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ದೊರಕಲು ಕಾರಣರಾದ ಮಂಜುನಾಥ ಭಂಡಾರಿ, ಕೆ. ಹರೀಶ್ ಕುಮಾರ್, ಬಿ. ರಮಾನಾಥ ರೈ, ರಕ್ಷಿತ್ ಶಿವರಾಮ್ ಹಾಗೂ ಯು.ಟಿ. ಖಾದರ್ ಫರೀದ್ ಅವರಿಗೆ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೆಪಿಸಿಸಿ ಮಾಧ್ಯಮ ವಕ್ತಾರ ಜಗನ್ನಾಥ ಲಾಯಿಲ, ಸಮನ್ವಯ ಸಮಿತಿ ಸದಸ್ಯ ರಮೇಶ್ ಆರ್., ಅಕ್ರಮ-ಸಕ್ರಮ ನಾಮನಿರ್ದೇಶಿತ ಸದಸ್ಯ ಶ್ರೀಧರ ಕಳೆಂಜ, ಎಸ್‌ಸಿ ಘಟಕದ ಸದಸ್ಯರಾದ ನಾರಾಯಣ ಪುದುವೆಟ್ಟು, ಮಾಧವ ಶಿಶಿಲ, ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ವೆಂಕಣ್ಣ ಕೊಯ್ಯೂರು, ಕಾಂಗ್ರೆಸ್ ಎಸ್‌ಸಿ ಘಟಕದ ಸದಸ್ಯ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು: ಬಿಎನ್‌ವೈಎಸ್ ವಿದ್ಯಾರ್ಥಿಗಳ ಮತ್ತು ಪಿಜಿ ವಿದ್ಯಾರ್ಥಿಗಳ ಶಿಷ್ಯೋಪನಯನ

Suddi Udaya

ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

Suddi Udaya

ವೇಣೂರು ಸರಕಾರಿ ಪ.ಪೂ. ಕಾಲೇಜಿಗೆ ಶೇ.94.47 ಫಲಿತಾಂಶ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಹಿಂದಿನ ಉಪಾಧ್ಯಕ್ಷೆ ಶಕುಂತಲಾ ಆಚಾರ್ ರಿಗೆ ಬೀಳ್ಕೊಡುಗೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya
error: Content is protected !!