ಬೆಳ್ತಂಗಡಿ ನಗರದ ರೆಂಕೆದಗುತ್ತು, ಕಸಬಾ ಗ್ರಾಮ ನಿವಾಸಿ ಶ್ರೇಯಸ್ ಎಸ್. ಕುಂಬಾರ (14 ವ) ಬಾಲಕ ಪಣಂಬೂರು ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇದೀಗ ಬಾಲಕನ ಮೃತದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಅ.6 ರಂದು ಪತ್ತೆಯಾಗಿದೆ.
ಘಟನೆ ವಿವರ: ಬಾಲಕ ಶ್ರೇಯಸ್ ಎಸ್. ತನ್ನ 4 ಜನ ಅಪ್ರಾಪ್ತ ಸ್ನೇಹಿತರ ಜೊತೆ ಅ.4 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ ತರಬೇತಿಗಾಗಿ ಮಂಗಳೂರಿಗೆ ಬಂದವರು, ತರಬೇತಿ ಮುಗಿದ ನಂತರ ಶ್ರೇಯಸ್ ಹಾಗೂ ಆತನ ಸ್ನೇಹಿತರು ಸ್ಟೇಟ್ ಬ್ಯಾಂಕ್ ನಿಂದ ಪಣಂಬೂರು ಬೀಚ್ ಗೆ ಬಂದು, ಸಂಜೆ ಸುಮಾರು 4:30 ರಿಂದ 5 ಗಂಟೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು. ಸಂಜೆ ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಶ್ರೇಯಸ್ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು.
ಇದೀಗ ತೀವ್ರ ಕಾರ್ಯಾಚರಣೆಯ ಬಳಿಕ ಮೃತ ದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಪತ್ತೆಯಾಗಿದೆ.













