33.7 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕದ ಕರಾವಳಿ ಭಾಗದಲ್ಲಿ ಹೈಕೋರ್ಟುನ ಸಂಚಾರಿ ಪೀಠ ಸ್ಥಾಪನೆ ; ಹೈಕೋರ್ಟಿಗೆ ವರದಿ ನೀಡಲು ಮೂವರು ನ್ಯಾಯಮೂರ್ತಿಗಳ ಉನ್ನತ ಮಟ್ಟದ ಸಮಿತಿ ರಚನೆ

ಬೆಳ್ತಂಗಡಿ: ಕರ್ನಾಟಕದ ಕರಾವಳಿ ಭಾಗದಲ್ಲಿ ಹೈಕೋರ್ಟುನ ಸಂಚಾರಿ ಪೀಠ ಸ್ಥಾಪನೆ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಹಲವು ಸಮಯಗಳ ಹೋರಾಟ ಹಾಗೂ ಮನವಿಯನ್ನು ಪುರಸ್ಕರಿಸಿ, ಪೀಠ ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಮೂವರು ನ್ಯಾಯಮೂರ್ತಿಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ವರದಿ ನೀಡಲು ಸೂಚಿಸಿದ್ದಾರೆ. ಈ ಸಮಿತಿಯವರು ಶೀಘ್ರವೇ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ಹೈಕೋರ್ಟು ಸಂಚಾರ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಶಾಸಕರಾದ ಐವಾನ್ ಡಿ ಸೋಜ ಹೇಳಿದರು.

ಅವರು ಅ.9ರಂದು ಬೆಳ್ತಂಗಡಿ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕರಾವಳಿ ಕರ್ನಾಟಕದ ಮಂಗಳೂರಿನಲ್ಲಿ ಹೈಕೋರ್ಟಿನ ಸಂಚಾರಿಪೀಠ ಸ್ಥಾಪನೆ ಮಾಡಬೇಕೆಂಬುದು ದ.ಕ ಹಾಗೂ ಉಡುಪಿ ಜಿಲ್ಲೆಯವರು ಕಳೆದ 18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ ಭಾಗದವರ ಚಿಂತನೆ ಬೇರೆಯೇ ಇದೆ. ಕರಾವಳಿ ಭಾಗದ ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ರಾಜ್ಯ ಸರಕಾರ ಬೆಂಬಲ ವ್ಯಕ್ತಪಡಿಸಿದೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೈಕೋರ್ಟಿನ ಮುಖ್ಯ ನ್ಯಾಯಾಮೂರ್ತಿಗಳಿಗೆ ಪತ್ರ ಬರೆದು, ಕರಾವಳಿ ಭಾಗದಲ್ಲಿ ಹೈಕೋರ್ಟು ಸಂಚಾರಿ ಪೀಠದ ಅಗತ್ಯವಿದ್ದು, ಇದು ನೈಜ ಬೇಡಿಕೆಯಾಗಿದೆ. ಸರಕಾರದಿಂದ ಎಲ್ಲಾ ರೀತಿಯ ಸೌಕರ್ಯ ಒದಗಿಸಲು ಸಿದ್ಧ ಎಂದು ತಿಳಿಸಿದ್ದರು ಎಂದು ಐವಾನ್ ತಿಳಿಸಿದರು.

ಕರಾವಳಿ ಭಾಗದ ಶೇ 40 ಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ. ಕರಾವಳಿಯ ಕಕ್ಷಿದಾರರು ತಮ್ಮ ನ್ಯಾಯಕ್ಕಾಗಿ ದೂರದ ಬೆಂಗಳೂರು ಹೋಗುವ ಅನಿವಾರ್ಯ ಸ್ಥಿತಿಯಿದೆ. ಮಂಗಳೂರು ಮತ್ತು ಉಡುಪಿಯವರು ಸುಮಾರು 350ರಿಂದ 400 ಕಿ.ಮೀ ದೂರದ ಬೆಂಗಳೂರಿಗೆ ಹೋಗಬೇಕಾದರೆ ಒಂದೆಡೆ ಹಣ ಖರ್ಚು ಮತ್ತೊಂದೆಡೆ ಸಮಯ ಕೂಡಾ ವ್ಯರ್ಥವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ರಚಿಸಲಾದ ಹೋರಾಟ ಸಮಿತಿ, ವಕೀಲರ ಜೊತೆ ಸಂವಾದ ನಡೆಸಿದೆ. ಹೈಕೋರ್ಟಿನ ನ್ಯಾಯಾಧೀಶರುಗಳು ಹಾಗೂ ಸರಕಾರಿ ಅಧಿಕಾರಿಗಳ ಭೇಟಿ ಮಾಡಿ ಸಂಚಾರಿ ಪೀಠದ ಅಗತ್ಯತೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ರಚಿಸಲಾದ ಹೈಕೋರ್ಟು ಮೂರು ಮಂದಿ ನ್ಯಾಯಾಮೂರ್ತಿಗಳನ್ನು ಒಳಗೊಂಡ ಸಮಿತಿ ಅಕ್ಟೋಬರ್ ತಿಂಗಳ ಕೊನೆಯಲ್ಲಿ ದ.ಕ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಆರು ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ, ಭೇಟಿ ವೇಳೆ ಇಲ್ಲಿನ ಪರಿಸ್ಥಿತಿ, ಮೂಲಸೌಕರ್ಯ ಹಾಗೂ ಇತರ ಅಗತ್ಯತೆಗಳು, ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ವಕೀಲರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ಬಳಿಕ ತನ್ನ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಲಿದ್ದಾರೆ. ಸಮಿತಿಯವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪೀಠ ಸ್ಥಾಪನೆಯ ಅಗತ್ಯತೆಯನ್ನು ನಾವು ಸಮಿತಿಗೆ ಅರಿವು ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ಕಾನೂನು ಯಾವುದೇ ವ್ಯಕ್ತಿಗೆ ದುಬಾರಿಯಾಗಬಾರದು. ಯಾರು ಕೂಡ ನ್ಯಾಯದಿಂದ ವಂಚಿತವಾಗಬಾರದು. ಕಡಿಮೆ ಅವಧಿಯಲ್ಲಿ ನ್ಯಾಯ ಸಿಗಬೇಕು, ಕಾನೂನು ಜನರ ಬಳಿಗೆ ಬರಬೇಕು. ಸವಲತ್ತುಗಳು ಹತ್ತಿರದಲ್ಲಿ ಸಿಗಬೇಕು. ಇದಕ್ಕಾಗಿ ಕರಾವಳಿಯಲ್ಲಿ ಹೈಕೋರ್ಟಿನ ಪೀಠ ಆಗಲೇಬೇಕು. ಪೀಠ ಯಾಕೆ ? ಬೇಕು ಎಂಬುದಕ್ಕೆ ಜನಜಾಗೃತಿ ಮೂಡಿಸುತ್ತಿದ್ದೇವೆ. ರೈತರು, ಸಂಘ, ಸಂಸ್ಥೆಗಳು, ಸಾರ್ವಜನಿಕರು, ಕಾನೂನು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಂವಾದ ನಡೆಸುತ್ತಿದ್ದೇವೆ. ಸಮಿತಿಯವರು ಬಂದಾಗ ಅವರಿಗೆ ಪೀಠದ ಅಗತ್ಯತೆ ಬಗ್ಗೆ ಮನವರಿಗೆ ಮಾಡುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಕರೆ ನೀಡಿದರು.


ಮಂಗಳೂರಿನ ಹಳೆ ಡಿ.ಸಿ ಕಟ್ಟದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಬೇಕಾದ ಜಾಗ, ವಸತಿ ವ್ಯವಸ್ಥೆ ಇದೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಅ.12ರಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದು ಸಮಾಲೋಚನೆ ನಡೆಸಲಿದ್ದಾರೆ ಎಂದು ವಿವರಿಸಿದರು.
ಬೆಳ್ತಂಗಡಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಧನಂಜಯ ರಾವ್ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಕಸ್ತೂರಿರಂಗನ್, ಅರಣ್ಯ, ವನ್ಯಜೀವಿ ಸೇರಿದಂತೆ ಹಲವು ವಿಭಿನ್ನ ಸಮಸ್ಯೆಗಳಿವೆ. ಭೂ ಮಸೂದೆ ಜಾರಿಯಾಗಿ ಹಲವು ವರ್ಷಗಳೇ ಕಳೆದರೂ, ಬೆಳ್ತಂಗಡಿಯ ಆನೇಕ ಮಂದಿಯ ಪ್ರಕರಣ ಹೈಕೋರ್ಟಿನಲ್ಲಿ ಈಗಲೂ ಇತ್ಯರ್ಥವಾಗದೆ ಉಳಿದಿದೆ. ಕಕ್ಷಿದಾರ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸುಮಾರು 300ರಿಂದ 4೦೦ಕಿ.ಮೀ ದೂರಕ್ಕೆ ಹೋಗಿ ಬರಬರುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಸಂಚಾರಿ ಪೀಠದ ಅಗತ್ಯತೆ ಬಹಳಷ್ಟು ಇದೆ ಎಂದು ತಿಳಿಸಿದರು. ಜಿಲ್ಲಾ ಹೋರಾಟ ಸಮಿತಿಯ ಪಿಆರ್‌ಒ ಎಂ.ಪಿ ನೊರೋನ್ಹಾ ಪೂರಕ ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ. ಸೋಜ, ಕಾರ್ಯದರ್ಶಿ ಪ್ರಶಾಂತ್, ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚ್ಚರ್ಡ್ ಡಿ ಕೋಸ್ಟ, ಕಾರ್ಯದರ್ಶಿ ಗೌತಮ್ , ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನ್ಯಾಯವಾದಿ ಶೈಲೇಶ್ ಠೋಸರ್ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಧರ್ಮಸ್ಥಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೌಢ ಶಾಲಾ ವಿದ್ಯಾರ್ಥಿನಿ: ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ವೇಣೂರು : ಟೈಲರ್ ಸಂಜೀವ ಪಾಣೂರು ಹೃದಯಾಘಾತದಿಂದ ನಿಧನ

Suddi Udaya

ಶೇಡಿಯಿಂದ ಕುಕ್ಕಾಜೆ ಯವರೆಗೆ ರಸ್ತೆ ಬದಿಯ ಗಿಡ ಗಂಟಿಗಳ ತೆರವು ಕಾರ್ಯ

Suddi Udaya

ವೇಣೂರು: ಉಳ್ತೂರು ನೂರುಲ್ ಹುದಾ ದರ್ಸ್ ವಿದ್ಯಾರ್ಥಿ ಸಾಹಿತ್ಯ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ದುರ್ಗಾ ಹೋಮ ಹಾಗೂ ವಿದ್ಯಾಸರಸ್ವತಿ ಪೂಜೆ ಮತ್ತು ನೂತನ ತರಗತಿ ಕೊಠಡಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಕ್ಯಪದವು ಲಾವಣ್ಯ ಹತ್ಯೆ ಆರೋಪಿಗೆ ನ್ಯಾಯಾಂಗ ಬಂಧನ

Suddi Udaya
error: Content is protected !!