ಉಜಿರೆ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರವು ಓಡಿಲ್ನಾಳದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಎಸ್‌ಡಿಎಂಇ ಸೊಸೈಟಿ (ರಿ.), ಉಜಿರೆಯ ಶೈಕ್ಷಣಿಕ ಸಂಯೋಜಕರಾದ ಎಸ್.ಎನ್. ಕಾಕತ್ಕರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಕೇವಲ ಸೇವಾ ಮನೋಭಾವವನ್ನು ಬೆಳೆಸುವುದಷ್ಟೇ ಅಲ್ಲದೆ, ಅವರ ವ್ಯಕ್ತಿತ್ವ ವಿಕಸನ, ಸಾಮಾಜಿಕ ಜವಾಬ್ದಾರಿ ಹಾಗೂ ಸಮಾಜದೊಂದಿಗೆ ಬೆರೆಯುವ ಗುಣವನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ . ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜದ ಅಗತ್ಯಗಳನ್ನು ಅರ್ಥಮಾಡಿಕೊಂಡು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಸಂತೋಷ್ ಮಾತನಾಡಿ, “ಎನ್‌ಎಸ್‌ಎಸ್ ಕೇವಲ ಶ್ರಮದಾನಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ; ಅದು ವ್ಯಕ್ತಿತ್ವ ವಿಕಸನದ ಪಾಠಶಾಲೆ” ಎಂದರು. ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಹಕಾರ, ನಾಯಕತ್ವ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಗುಣಗಳು ಬೆಳೆಯುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಸಮಾಜದ ನೈಜ ಪರಿಸ್ಥಿತಿಯನ್ನು ಅರಿತುಕೊಂಡು, ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
“ಯುವಕರಿಗಾಗಿ ನನ್ನ ಭಾರತ, ಯುವಕರಿಗಾಗಿ ಡಿಜಿಟಲ್ ಸಾಕ್ಷರತೆ” ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಮಾಜ, ಪರಿಸರ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಅನುಭವಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವಾಸ್ತುಶಿಲ್ಪದ ಕುರಿತು ಮಾಹಿತಿ, ಸಮಗ್ರ ಕೃಷಿ ಪದ್ಧತಿ, ಪರಿಸರ ಸಂರಕ್ಷಣೆ, ಮನೆ-ಮನ ಭೇಟಿ ಹಾಗೂ ವಿವಿಧ ಸಾಮಾಜಿಕ ಜಾಗೃತಿ ಚಟುವಟಿಕೆಗಳ ಜವಾಬ್ದಾರಿ ವಹಿಸಲಾಗಿದೆ.
ಇದರೊಂದಿಗೆ ಎಸ್‌ಡಿಎಂ ಆಸ್ಪತ್ರೆ, ಉಜಿರೆ ವತಿಯಿಂದ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಗ್ರಾಮಸ್ಥರೊಂದಿಗೆ ನೇರವಾಗಿ ಸಂವಹನ ನಡೆಸುವ ಮೂಲಕ ಅವರ ಅಗತ್ಯಗಳನ್ನು ಅರಿಯುವುದು, ಆರೋಗ್ಯ ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಗ್ರಾಮೀಣ ಸಮುದಾಯದೊಂದಿಗೆ ವಿದ್ಯಾರ್ಥಿಗಳ ಬಾಂಧವ್ಯವನ್ನು ಬೆಳೆಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್, ಕೆ. ಪಾಂಡ್ಯರಾಜ ಬಳ್ಳಾಲ್ ನರ್ಸಿಂಗ್ ಸಂಸ್ಥೆ, ಉಳ್ಳಾಲ, ಮಂಗಳೂರಿನ ಉಪಪ್ರಾಂಶುಪಾಲರಾದ ಪದ್ಮಾವತಿ ಪೂಜಾರಿ, ಸರ್ಕಾರಿ ಪ್ರೌಢಶಾಲೆ, ಮಿತ್ತಬಾಗಿಲಿನ ಮುಖ್ಯ ಶಿಕ್ಷಕರಾದ ಗೋಪಾಲ, ಓಡಿಲ್ನಾಳ ಶಾಲೆಯ ಮುಖ್ಯ ಶಿಕ್ಷಕಿ ಉಷಾ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅರುಣ್ ಸುಮಿತ್ ಡಿಸೋಜಾ ಹಾಗೂ ಎನ್‌ಎಸ್‌ಎಸ್ ಉಪಯೋಜನಾಧಿಕಾರಿಗಳಾದ ತ್ರಿಭುವನ್ ಜೈನ್ ಮತ್ತು ರೆನಿಟಾ ಫೆರ್ನಾಂಡೀಸ್ ಉಪಸ್ಥಿತರಿದ್ದರು.
ಎಸ್‌ಡಿಎಂ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ಯೋಜನಾಧಿಕಾರಿ ಸಾಯಿ ಚರಣ್ ಸಿ.ಎಚ್. ಸ್ವಾಗತಿಸಿದರು. ವಿದ್ಯಾರ್ಥಿನಿ ನಾಯಕಿ ಕುಮಾರಿ ಮಂಜುಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವೈಶಾಖ್ ವಂದಿಸಿದರು.













