ಉಜಿರೆ : ಭವಿಷ್ಯದಲ್ಲಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಲಿದ್ದು, ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಅನುಭವ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮೈಸೂರಿನ ಸಿಎಸ್‌ಐಆರ್–ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್–ಸಿಎಫ್‌ಟಿಆರ್‌ಐ) ಹಿರಿಯ ವಿಜ್ಞಾನಿ ಡಾ. ಸುಹಾಸ್ ಆರ್. ಹೇಳಿದರು.
ಇವರು ಎಸ್‌ಡಿಎಂ ಕಾಲೇಜು (ಸ್ವಾಯತ್ತ), ಉಜಿರೆಯ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾದ ‘Chemical Synergies: Innovations for Health, Environmental Sustainability and Industrial Transformation (ChemSyn–2026)’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಶೋಧನೆಯು ಕೇವಲ ವಿಜ್ಞಾನ ವಿಭಾಗಕ್ಕೆ ಸೀಮಿತವಾದ ಚಟುವಟಿಕೆಯಲ್ಲ. ವಿವಿಧ ವಿಭಾಗಗಳ ಜ್ಞಾನ ಮತ್ತು ಪರಿಣತಿಯನ್ನು ಒಗ್ಗೂಡಿಸುವ ಮೂಲಕ ಸಂಶೋಧನೆಗೆ ಹೊಸ ಆಯಾಮಗಳನ್ನು ನೀಡಬಹುದು. ಅಂತರವಿಭಾಗೀಯ ಸಹಯೋಗವು ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುವುದರೊಂದಿಗೆ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಸಾಯನಶಾಸ್ತ್ರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಉದ್ಯೋಗ, ಸಂಶೋಧನೆ ಹಾಗೂ ಉನ್ನತ ಅಧ್ಯಯನದ ಅವಕಾಶಗಳಿವೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವಿಷಯದ ಆಳವಾದ ಜ್ಞಾನವನ್ನು ಗಳಿಸುವುದರ ಜೊತೆಗೆ ಪ್ರಯೋಗಾಲಯದ ಕೆಲಸ, ಪ್ರಾಯೋಗಿಕ ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ತರಗತಿಯಲ್ಲಿ ಕಲಿತ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಸಾಮರ್ಥ್ಯವೇ ವಿದ್ಯಾರ್ಥಿಗಳ ಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಹಂತದಲ್ಲಿಯೇ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರಬೇಕು. ಗುರಿ ಸಾಧನೆಗಾಗಿ ನಿರಂತರ ಪರಿಶ್ರಮ, ಏಕಾಗ್ರತೆ ಮತ್ತು ಶಿಸ್ತು ಅಗತ್ಯ. ತಾತ್ಕಾಲಿಕ ಅನುಕೂಲಗಳಿಗೆ ಮಾರುಹೋಗದೆ, ದೀರ್ಘಕಾಲೀನ ಬೆಳವಣಿಗೆಗೆ ಪೂರಕವಾದ ಕೌಶಲ್ಯ ಮತ್ತು ಅನುಭವಗಳನ್ನು ಗಳಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳು ಹಾಗೂ ಅನಗತ್ಯ ಚಟುವಟಿಕೆಗಳಲ್ಲಿ ಅತಿಯಾಗಿ ಸಮಯ ವ್ಯಯಿಸುವುದನ್ನು ತಪ್ಪಿಸಿ, ತಮ್ಮ ಕಲಿಕೆ ಮತ್ತು ವೃತ್ತಿಜೀವನದ ಗುರಿಗಳತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.
ಭವಿಷ್ಯದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಲು ಇಂದಿನಿಂದಲೇ ಪರಿಶ್ರಮಪಟ್ಟು ಕೆಲಸ ಮಾಡಬೇಕು. ತ್ವರಿತ ಫಲಿತಾಂಶಗಳ ಆಸೆಗೆ ಒಳಗಾಗಿ ತಮ್ಮ ದೀರ್ಘಕಾಲೀನ ಗುರಿಗಳಲ್ಲಿ ರಾಜಿ ಮಾಡಿಕೊಳ್ಳದೆ, ನಿರಂತರ ಕಲಿಕೆ, ಪ್ರಾಯೋಗಿಕ ಅನುಭವ ಮತ್ತು ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸ್ಪಷ್ಟ ಗುರಿ, ಉತ್ತಮ ದೃಷ್ಟಿಕೋನ ಮತ್ತು ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಇಂತಹ ರಾಷ್ಟ್ರೀಯ ಸಮ್ಮೇಳನಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಸಂಶೋಧನೆಗಳ ಕುರಿತು ತಿಳಿದುಕೊಳ್ಳಲು ಹಾಗೂ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಉತ್ತಮ ವೇದಿಕೆಯಾಗಿವೆ ಎಂದು ಎರಡು ದಿನಗಳ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಸಂಶೋಧಕರು, ಪ್ರಬಂಧ ಮಂಡಿಸಿದವರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಂಘಟಕರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಸಮಾರೋಪ ಸಮಾರಂಭದ ಅತಿಥಿಗಳಾದ ಡಾ. ಸುಹಾಸ್ ಆರ್ , ಕನ್ವೀನರ್ ನಂದಾ ಕುಮಾರಿ ಕೆ.ಪಿ., ಕೋ-ಕನ್ವೀನರ್ ದಿವ್ಯಾ ಹಾಗೂ ಡಾ. ಗಾನವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಕುಲಸಚಿವ ಪ್ರೊ ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಪಿಜಿ ವಿಭಾಗದ ಡೀನ್ ಡಾ. ಸೌಮ್ಯ ಬಿ ಪಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು,
ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಹಾಗೂ ಪ್ರಬಂಧ ಮಂಡನಕಾರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಮ್ಮೆಳನದ ಕೋ-ಕನ್ವೀನರ್ ಡಾ. ಗಾನವಿ ಸ್ವಾಗತಿಸಿದರು.
ಸಮ್ಮೇಳನದ ಕನ್ವೀನರ್ ನಂದಾ ಕುಮಾರಿ ಕೆ.ಪಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಬಿ. ಹಾಗೂ ವಿದ್ಯಾರ್ಥಿನಿ ಅನ್ವಿತಾ ಸೆರಾವೊ ಕಾರ್ಯಕ್ರಮವನ್ನು ನಿರೂಪಿಸಿದರು. ಕೋ-ಕನ್ವೀನರ್ ದಿವ್ಯಾ ವಂದನಾರ್ಪಣೆ ಸಲ್ಲಿಸಿದರು.
ChemSyn–2026ರಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆಗೆ ಪ್ರಶಸ್ತಿ ಪ್ರದಾನ :
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸೃಷ್ಟಿ ಜಿ. ಅವರು ಪಡೆದುಕೊಂಡರು. ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಿಪ್ರಾ ನಾಯಕ್ ಅವರು ತಮ್ಮದಾಗಿಸಿಕೊಂಡರು. ಸಂಶೋಧನಾ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವಿಭಾಗದ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಯನ್ನು ಮಣಿಪಾಲದ ಮಾಹೆಯ (MAHE) ಜೈವಿಕ ಭೌತಶಾಸ್ತ್ರ ವಿಭಾಗದ ಯಶಸ್ವಿನಿ ರೆಡ್ಡಿ ಅವರು ಗಳಿಸಿದರು.
ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಕಾರ್ಯಗಳನ್ನು ಮೌಖಿಕ ಪ್ರಬಂಧ ಹಾಗೂ ಪೋಸ್ಟರ್ ಪ್ರಸ್ತುತಿಗಳ ಮೂಲಕ ಹಂಚಿಕೊಂಡರು. ಅತ್ಯುತ್ತಮ ಪ್ರಸ್ತುತಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಂಶೋಧನಾ ಆಸಕ್ತಿ, ವೈಜ್ಞಾನಿಕ ಚಿಂತನೆ ಮತ್ತು ಶೈಕ್ಷಣಿಕ ಸಾಧನೆಗಳಿಗೆ ಪ್ರೋತ್ಸಾಹ ನೀಡಲಾಯಿತು.













