ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಉಜಿರೆಯ ಇಂದ್ರಪ್ರಸ್ಥ ಒಳಾಂಗಣದಲ್ಲಿ ಆಯೋಜಿಸಲಾದ ಬಾಲಕ ಮತ್ತು ಬಾಲಕಿಯರ ಅಂತರ ಪಾಲಿಟೆಕ್ನಿಕ್ ಕಬಡ್ಡಿ ಪಂದ್ಯಾವಳಿ–2026ಕ್ಕೆ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಇವರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ, ಶಿಸ್ತು ಮತ್ತು ಗುರಿಯೆಡೆಗಿನ ಬದ್ಧತೆ ಅಗತ್ಯ ಎಂದರು. ನನ್ನ ಸಾಧನೆ ಒಂದೇ ದಿನದಲ್ಲಿ ದೊರೆತದ್ದಲ್ಲ. ಕಬಡ್ಡಿ ಕ್ಷೇತ್ರದಲ್ಲಿ ಸಾಧನೆ ಮಾಡಲು ನಾನು 15 ವರ್ಷಗಳ ಕಾಲ ಪರಿಶ್ರಮಪಟ್ಟಿದ್ದೇನೆ. ಈ ಪಯಣದಲ್ಲಿ ಹಲವು ಏಳುಬೀಳುಗಳನ್ನು ಎದುರಿಸಿದ್ದೇನೆ. ಆದರೂ ಕನಸಿನ ಬೆನ್ನಟ್ಟುವ ಪ್ರಯತ್ನವನ್ನು ಎಂದಿಗೂ ಕೈಬಿಡಲಿಲ್ಲ. ಪೋಷಕರ ಮತ್ತು ತರಬೇತುದಾರರ ಸಲಹೆ ಹಾಗೂ ಮಾರ್ಗದರ್ಶನವನ್ನು ಅನುಸರಿಸುವುದರಿಂದ ಉತ್ತಮ ಕಲಿಕೆ ಸಾಧ್ಯವಾಗುತ್ತದೆ.
ಕ್ರೀಡೆಯಲ್ಲಿ ಗೆಲುವು ಸೋಲು ಎನ್ನುವುದಕ್ಕಿಂತಲೂ ಪಂದ್ಯಾವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ತಂಡದೊಂದಿಗೆ ಸಮನ್ವಯದಿಂದ ಸಾಗುವುದು ಹಾಗೂ ಶಿಸ್ತನ್ನು ಪಾಲಿಸುವುದು ಅತ್ಯಂತ ಮಹತ್ವದ್ದು ಎಂದು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ತಮ್ಮನ್ನು ಗೌರವಿಸಿ ಪ್ರೋತ್ಸಾಹಿಸಿದ ಎಸ್ಡಿಎಂ ಕಾಲೇಜು ಹಾಗೂ ಸಂಸ್ಥೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕ್ರೀಡಾಕೂಟ : ರಮೇಶ್ ಎಚ್.
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕ್ರೀಡಾಕೂಟಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ರಮೇಶ್ ಎಚ್. ಹೇಳಿದರು. ಸಂಸ್ಥೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಹಲವು ಆಧುನಿಕ ಕ್ರೀಡಾ ಸೌಲಭ್ಯಗಳು ಪ್ರಗತಿಯ ಹಂತದಲ್ಲಿವೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿದಿನ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಸ್ಪಷ್ಟ ಗುರಿ, ಶಿಸ್ತು ಮತ್ತು ನಿರಂತರ ಪರಿಶ್ರಮವನ್ನು ರೂಢಿಸಿಕೊಂಡರೆ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ ಮಾತನಾಡಿ, ಎಸ್ಡಿಎಂ ಸಂಸ್ಥೆಯು ಶಿಕ್ಷಣಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗೂ ನೀಡುತ್ತಿದೆ. ಇಂದಿನ ಕಬಡ್ಡಿ ಪಂದ್ಯಾವಳಿ ಕೇವಲ ಪಂದ್ಯಗಳಿಗೆ ಸೀಮಿತವಾಗದೆ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಒಂದೆಡೆ ಸೇರಲು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಪರಸ್ಪರ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆ ವಿಕಸನಕ್ಕೆ ನೆರವಾಗುವುದರೊಂದಿಗೆ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಡಿಎಂ ಆಡಳಿತ ಮಂಡಳಿ ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಅತಿಥಿ ಧನಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಗೆ ವಿಶೇಷ ಆಕರ್ಷಣೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕಬಡ್ಡಿ ವೀಕ್ಷಕ ವಿವರಣೆಗಾರರಾದ ಸುಧಾಕರ ಉಪ್ಪಳ ಮತ್ತು ವಿಜಯ್ ಅತ್ತಾಜೆ ಉಪಸ್ಥಿತರಿದ್ದರು. ಕಾಲೇಜು ಹಾಗೂ ಅತಿಥಿಗಳ ವತಿಯಿಂದ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ನ ಕಬಡ್ಡಿ ತರಬೇತುದಾರ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ರವೀಶ್ ಪದ್ಮುಲೆ ಅವರು ಪಂದ್ಯಾವಳಿಯ ಉದ್ದೇಶ, ಆಯೋಜನೆಯ ಹಿನ್ನೆಲೆ ಹಾಗೂ ಸ್ಪರ್ಧಿಗಳಿಗೆ ಅಗತ್ಯವಾದ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ಸಭಿಕರಿಗೆ ತಿಳಿಸಿದರು.
ಪಂದ್ಯಾಟಕ್ಕೆ ಮೂಡುಬಿದಿರೆ, ಸುಳ್ಯ, ಪುತ್ತೂರು, ಕಾರ್ಕಳ, ಕಾಪು ಹಾಗು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಲಿಖಿತ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ತೃಪ್ತಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಈಶ್ವರ್ ವಂದನಾರ್ಪಣೆ ಮಾಡಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಸಹಕರಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಶ್ವಂತ್ ಗೌಡ ಅವರು ಪಂದ್ಯಾವಳಿಯನ್ನು ಸಂಯೋಜಿಸಿದರು












