ಬೆಳ್ತಂಗಡಿ: ದಾವಣಗೆರೆಯ ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಉಜಿರೆಯ ಡಾ. ಮನಿಷಾ ಎಂ. ಅವರು ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿದ್ದಾರೆ.
ಉಜಿರೆ ನಿವಾಸಿಗಳಾದ ಮೋಹನ್ ಕೆ. ಸಾಲಿಯಾನ್ ಮತ್ತು ಸ್ವಪ್ನಾ ದಂಪತಿಯ ಪುತ್ರಿಯಾದ ಇವರು ಬಾಲ್ಯದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿ ಇದ್ದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯನ್ನು ಉಜಿರೆ ಎಸ್.ಡಿ.ಎಂ ನಲ್ಲಿ ಪೂರ್ಣಗೊಳಿಸಿ, 2016ರಲ್ಲಿ ಎಂಬಿಬಿಎಸ್ ಪ್ರಾರಂಭಿಸಿ, 2022ರಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಪದವಿ ಪೂರ್ಣಗೊಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ಗ್ರಾಮೀಣ ಸೇವೆಯನ್ನು (Rural Service) ನಿರ್ವಹಿಸಿದರು. ಈ ಅವಧಿಯಲ್ಲಿಯೇ ‘ನೀಟ್ ಪಿಜಿ’ (NEET PG) ಪರೀಕ್ಷೆಯನ್ನು ಬರೆದು, 6609ನೇ ಶ್ರೇಯಾಂಕವನ್ನು (Rank) ಪಡೆದರು.
2023ರಲ್ಲಿ ದಾವಣಗೆರೆಯಲ್ಲಿ ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಎಂಡಿ (MD) ಡರ್ಮಟಾಲಜಿ (ಚರ್ಮರೋಗ ವಿಜ್ಞಾನ) ಅಧ್ಯಯನ ಮಾಡಿ ಈ ಅವಧಿಯಲ್ಲಿ, ಐಎಡಿವಿಎಲ್ (IADVL) ಕರ್ನಾಟಕ ಶಾಖೆಯ ‘ಯುವಡರ್ಮಾ’ (Yuvaderma) ನಿಯತಕಾಲಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
2025ರಲ್ಲಿ ಮಂಗಳೂರಿನ ರೇವತಿ ಮತ್ತು ವಿವೇಕ್ ದಂಪತಿಯ ಪುತ್ರ ವಿಖ್ಯಾತ್ ಸುವರ್ಣ (ME, MBA – IIM ಬೆಂಗಳೂರು ) ಇವರನ್ನು ವಿವಾಹವಾದರು. ಪ್ರಸುತ್ತ ಇವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.












