31.4 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ‘ಲೈಬ್ರೇರಿಯನ್ಸ್ ಕನೆಕ್ಟ್’ ಕಾರ್ಯಕ್ರಮ

ಉಜಿರೆ: ಗ್ರಂಥಪಾಲಕರ ನಡುವೆ ಆಲೋಚನೆಗಳ ವಿನಿಮಯ, ಸಹಯೋಗ ಹಾಗೂ ಉತ್ತಮ ಗ್ರಂಥಾಲಯ ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ‘ಲೈಬ್ರೇರಿಯನ್ಸ್ ಕನೆಕ್ಟ್’ ವಿಶೇಷ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಮಂಗಳೂರು ಭಾಗದ ಎಸ್‌ಡಿಎಂ ಶಾಲಾ-ಕಾಲೇಜುಗಳ ಗ್ರಂಥಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಜಿರೆಯ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರಂಥಾಲಯದ ಮುಖ್ಯಸ್ಥೆ ಹಾಗೂ ಸಹ ಪ್ರಾಧ್ಯಾಪಕಿ ಡಾ. ರಜತಾ ಪಿ. ಶೆಟ್ಟಿ ಮಾತನಾಡಿ, ಇಂದಿನ ದಿನಗಳಲ್ಲಿ ಓದುಗರನ್ನು ಗ್ರಂಥಾಲಯದತ್ತ ಆಕರ್ಷಿಸಲು ಗ್ರಂಥಪಾಲಕರು ಗ್ರಂಥಾಲಯ ಮತ್ತು ಪುಸ್ತಕಗಳ ಸಾಂಪ್ರದಾಯಿಕ ಗಡಿಗಳನ್ನು ಮೀರಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಗ್ರಂಥಪಾಲಕರ ನಡುವೆ ಸಂಪರ್ಕ ಮತ್ತು ಸಹಕಾರವನ್ನು ಬಲಪಡಿಸಲು ಸಹಕಾರಿಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಗ್ರಂಥಪಾಲಕರು ಸಾಮಾನ್ಯವಾಗಿ ಏಕಾಂಗಿಯಾಗಿ ಕಾರ್ಯನಿರ್ವಹಿಸುವುದರಿಂದ, ತಮ್ಮ ಅನುಭವ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲು ಇಂತಹ ವೇದಿಕೆಗಳು ಅಗತ್ಯ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ತಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ರೀಡಥಾನ್’ ಸ್ಪರ್ಧೆಯ ಉದಾಹರಣೆ ನೀಡಿದ ಅವರು, ನಿಗದಿತ ಅವಧಿಯಲ್ಲಿ ಪುಸ್ತಕ ಓದಿ ಅದರ ಕುರಿತು ಅಭಿಪ್ರಾಯ ಹಂಚಿಕೊಳ್ಳುವಂತಹ ಚಟುವಟಿಕೆಗಳನ್ನು ಇತರ ಶಿಕ್ಷಣ ಸಂಸ್ಥೆಗಳೂ ಆಯೋಜಿಸಬೇಕು ಎಂದು ಸಲಹೆ ನೀಡಿದರು. ವಿಷಯ ಉಪನ್ಯಾಸಕರೊಂದಿಗೆ ಸಮನ್ವಯ ಸಾಧಿಸಿ, ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ವಿಷಯಾಧಾರಿತ ಪುಸ್ತಕಗಳನ್ನು ಪರಿಚಯಿಸಬೇಕು. ಪುಸ್ತಕಗಳಲ್ಲಿರುವ ವಿಶ್ವಾಸಾರ್ಹ ಮಾಹಿತಿಯ ಮಹತ್ವವನ್ನೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಗ್ರಂಥಾಲಯಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಉತ್ತಮ ಪದ್ಧತಿಗಳನ್ನು ತಿಳಿದುಕೊಳ್ಳಲು ಇತರ ಗ್ರಂಥಾಲಯಗಳಿಗೆ ಭೇಟಿ ನೀಡುವುದು ಹಾಗೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು ಅಗತ್ಯವಾಗಿದೆ. ಗ್ರಂಥಪಾಲಕರು ಅಭಿವೃದ್ಧಿ ಹೊಂದಿದಾಗ ಮಾತ್ರ ಗ್ರಂಥಾಲಯಗಳೂ ಬೆಳವಣಿಗೆ ಕಾಣಲು ಸಾಧ್ಯ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ (KRMSS) ವತಿಯಿಂದ ‘ಅತ್ಯುತ್ತಮ ಗ್ರಂಥಪಾಲಕ’ ಪ್ರಶಸ್ತಿಗೆ ಭಾಜನರಾದ ಡಾ. ರಜತಾ ಪಿ. ಶೆಟ್ಟಿ ಅವರನ್ನು ಗ್ರಂಥಪಾಲಕರ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಸಂತೋಷ್ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳನ್ನು ಮೊಬೈಲ್ ಆಕರ್ಷಣೆಯಿಂದ ದೂರ ತಂದು ಗ್ರಂಥಾಲಯದ ಕಡೆಗೆ ಸೆಳೆಯುವಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ್ ಪೂವಣಿ ಅವರು ಮಾತನಾಡಿ, ಜ್ಞಾನವನ್ನು ಹಂಚಿಕೊಂಡಷ್ಟೂ ಅದು ವೃದ್ಧಿಯಾಗುತ್ತದೆ. ಇತರರ ಜ್ಞಾನಾರ್ಜನೆಗೆ ಸಹಾಯ ಮಾಡುವ ಮೂಲಕ ಗ್ರಂಥಪಾಲಕರು ತಮ್ಮ ಸ್ವಂತ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬಹುದು ಎನ್ನುತ್ತಾ ಕಾರ್ಯಕ್ರಮದಲ್ಲಿ ಗ್ರಂಥಪಾಲಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಅತ್ಯುತ್ತಮ ಗ್ರಂಥಾಲಯ ಉಪಕ್ರಮಗಳ ಪ್ರದರ್ಶನ’ ನಡೆಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ಗ್ರಂಥಪಾಲಕರು ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಆಕರ್ಷಿಸಲು ಬಳಸುವ ಸೃಜನಾತ್ಮಕ ನೋಟಿಸ್ ಬೋರ್ಡ್ ಬರಹಗಳು ಹಾಗೂ ಇತರ ವಿನೂತನ ಪ್ರಯತ್ನಗಳನ್ನು ಪ್ರದರ್ಶಿಸಿದರು. ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಗ್ರಂಥಪಾಲಕರು ಎದುರಿಸುತ್ತಿರುವ ಸವಾಲುಗಳ ಕುರಿತು ಸಂವಾದವೂ ನಡೆಯಿತು. ಇದರೊಂದಿಗೆ ಪುಸ್ತಕ ಸವಾಲು, ಗ್ರಂಥಾಲಯ ಪದಗಳ ಒಗಟು ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಪಾಲಿಟೆಕ್ನಿಕ್ ವ್ಯವಸ್ಥಾಪಕ ಚಂದ್ರನಾಥ್ ಜೈನ್ ಉಪಸ್ಥಿತರಿದ್ದರು. ಗ್ರಂಥಪಾಲಕಿ ನಮಿತಾ ಶೆಟ್ಟಿ ಸ್ವಾಗತಿಸಿ, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಉಪನ್ಯಾಸಕ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related posts

ಅಳದಂಗಡಿ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾ. ರಮೇಶ್ ನೇಮಕ

Suddi Udaya

ಏ.18: ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಮಂದಾರ ಸಂಭ್ರಮ-2026

Suddi Udaya

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಕುಮಾರಧಾರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಶಿಶಿಲ: ಕಂಚಿನಡ್ಕ ನಿವಾಸಿ ಸುಂದರಿ ನಿಧನ

Suddi Udaya

ಕನ್ಯಾಡಿ II: ವಿ. ಆರ್. ಶಾರದಾ ನಿಧನ

Suddi Udaya
error: Content is protected !!