
ಬೆಳ್ತಂಗಡಿ : ಪತ್ರಿಕಾರಂಗದಲ್ಲಿ ಹಾಗೂ ಸಮಾಜಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜರಿಗೆ 2026 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಬಳಂಜ ಸುವರ್ಣ ನಿಲಯದ ಬಿ ಸಾಂತಪ್ಪ ಸುವರ್ಣ , ಮೀನಾಕ್ಕಿ ದಂಪತಿಯ ಎರಡನೇ ಪುತ್ರರಾಗಿರುವ ಇವರು ಪತ್ರಿಕಾರಂಗದಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಯುವಶಕ್ತಿಕ್ರಾಂತಿ ಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿ ಆರಂಭಿಸಿ ನಂತರದ ದಿನಗಳಲ್ಲಿ ಪ್ರಜಾವಾಣಿ, ಸಂಜೆವಾಣಿ , ನಮ್ಮಬಂಟ್ವಾಳ ಪತ್ರಿಕೆಯಲ್ಲಿ ವರದಿಗಾರರಾಗಿ, ಕಳೆದ 16 ವರ್ಷಗಳಿಂದ ವಿಜಯವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅನೇಕ ಮಾನವೀಯ ವರದಿಗಳನ್ನು ಮಾಡಿದ ಇವರು ಅನೇಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ವೈದ್ಯಕೀಯ ನೆರವು ನೀಡುವಲ್ಲಿ ಕಾರಣೀಕರ್ತರಾಗಿದ್ದಾರೆ. ಕುತ್ಲೂರಿನಲ್ಲಿ ನಡೆದ ಪತ್ರಕರ್ತರ ಪ್ರಥಮ ಗ್ರಾಮವಾಸ್ಥವ್ಯ ಕಾರ್ಯಕ್ರಮದ ನೇತೃತ್ವ ವಹಿಸಿ ರಾಜ್ಯದಲ್ಲಿ ಬೆಳ್ತಂಗಡಿ ತಾಲ್ಲೂಕನ್ನು ಗುರುತಿಸುವಂತೆ ಮಾಡಿದ್ದಾರೆ.
ತನ್ನ ವರದಿಗಳ ಮೂಲಕ ಅನೇಕ ಬಡ ಕುಟುಂಬಗಳು ವಾಸಿಸುವ ಕಾಲೋನಿಗಳ ಸಮಸ್ಯೆಗಳನ್ನು ಬೆಳಕಿಗೆ ತಂದು ಅ ಕಾಲೋನಿಗಳಿಗೆ ಸರಕಾರದ ನೆರವು ನೀಡುವಲ್ಲಿ ಯಶಸ್ಸು ಕಂಡವರಾಗಿದ್ದಾರೆ.
ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಶ್ರಮಿಸಿದ್ದು ಪ್ರಸ್ತುತ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಳಂಜ ಸರ್ಕಾರಿ ಶಾಲೆಗೆ ದಾಖಲಾತಿ ಕೊರತೆಯಿದ್ದ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ರಚಿಸಿ ಅದರ ಅಧ್ಯಕ್ಷರಾಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಸಂಸ್ಕಾರಯುತ ಶಿಕ್ಷಣ ಸೇರಿದಂತೆ ಶಾಲೆಯ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಎರಡು ವರ್ಷದಲ್ಲಿ 130 ಕ್ಕೂ ಅಧಿಕ ದಾಖಲಾತಿ ಅಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಶಾಲೆಗೆ ರೋಟರಿ ಕ್ಲಬ್ ನೆರವಿಗೆ ಪ್ರಯತ್ನಿಸಿ ಶಾಲೆಗೆ ಸಂಪೂರ್ಣ ಸೋಲಾರ್ ಅಳವಡಿಕೆ, ಕಲಾಮಂದಿರ ಎದುರು ಶೀಟ್ ಅಳವಡಿಕೆ, ಇಂಟರ್ ಲಾಕ್ ಅಳವಡಿಕೆ ಸೇರಿದಂತೆ 14 ಲಕ್ಷ ಅನುದಾನ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಶಾಲೆಯ ಕ್ರೀಡಾಂಗಣ ಅಗಲೀಕರಣ, ಚಿಣ್ಣರ ಅಂಗಣ ,ಇನ್ನಿತರ ಸೌಲಭ್ಯ ಒದಗಿಸಿಕೊಡುವಲ್ಲಿ ಶ್ರಮಿಸಿದ್ದು ಇವರ ಸೇವಾ ಕಾರ್ಯಗಳಿಗೆ ಸಾಕ್ಷಿಯಾಗಿದೆ.
ಪ್ರತೀ ವರ್ಷ ಸುಮಾರು 6 ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಿ ಮಾನವೀಯ ಸೇವೆಗೆ ಆಧ್ಯತೆ ನೀಡುತ್ತಾ ಬಂದಿದ್ದು, ಬೆಳ್ತಂಗಡಿ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾಗಿ, ತಾಲ್ಲೂಕು ಯುವ ಬಿಲ್ಲವ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಳಂಜ ಶ್ರಿ ನಾರಾಯಣಗುರು ಸೇವಾ ಸಮಿತಿಯ ನಿರ್ದೇಶಕರಾಗಿದ್ದಾರೆ.











