
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ
ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳನ್ನು ಮಂಗಳೂರು ಕಚೇರಿಯಲ್ಲಿ ನ.6ರಂದು ಭೇಟಿಯಾದ ಹೈಕೋರ್ಟ್ ವಕೀಲ ಅಮೃತೇಶ್‌ರವರು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಿಠಲ್ ಗೌಡ ವಿರುದ್ದ ದೂರು ಸಲ್ಲಿಸಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ಹಾಗೂ ವಿಠಲ ಗೌಡ ಅವರು ಸಂತೋಷ್ ರಾವ್ ಬಿಡುಗಡೆಗೆ ಅನುಕೂಲ ಮಾಡಿದ್ದಾರೆ. ಸಾರ್ವಜನಿಕ ಅಭಿಯೋಜಕರು, ಗೌರವಾನ್ವಿತ ನ್ಯಾಯಾಧೀಶರು ಹಾಗೂ ಇತರ ವಕೀಲರಿಗೆ ಹಣ ಪಾವತಿಸಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ವಿಠಲ ಗೌಡ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಸಾರ್ವಜನಿಕ ಅಭಿಯೋಜಕರಿಗೆ ಒಂದು ಕೋಟಿ ರೂ. ಪಾವತಿಸಲಾಗಿದೆ ಎಂದು ವಿಠಲ ಗೌಡ ಹೇಳಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಕೂಡ ಸಂತೋಷ್ ರಾವ್ ಬಿಡುಗಡೆಗೆ ಅನುಕೂಲವಾಗುವಂತೆ ವಕೀಲರಿಗೆ ಮತ್ತು ಇತರರಿಗೆ ಹಣ ಪಾವತಿಸಲಾಗಿದೆ ಎಂದು ಹೇಳಿರುವುದು ಕಂಡು ಬಂದಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಆರೋಪವಾಗಿದೆ. ಅಂದರೆ ಭ್ರಷ್ಟ ವಿಧಾನಗಳನ್ನು ಅನುಸರಿಸುವ ಮೂಲಕ ಆರೋಪಿಯ ಖುಲಾಸೆ ಆಗುವಂತೆ ಮಾಡಲಾಗಿದೆಯ ಎಂಬ ಅನುಮಾನ ಇದೆ ಎಂದು ದೂರಿನಲ್ಲಿ ತಿಳಿಸಿರುವ ಅಮೃತೇಶ್ ಅವರು ವೈದ್ಯಕೀಯ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ ಮರುಪರಿಶೀಲನೆ ಸೇರಿದಂತೆ ಎಸ್‌ಐಟಿಗೆ ಏಳು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.















