November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ದೇಯಿ ಬೈದೇತಿ ಆಯುರ್ವೇದಿಕ್ ಕೇಂದ್ರ, ಸಮುದಾಯ ಭವನ ಹಾಗೂ ಯಾತ್ರಿ ನಿವಾಸ ನಿರ್ಮಾಣಕ್ಕೆ ದಾನಿಗಳ ಮನೆಗಳಿಗೆ ಅಭಿವೃದ್ಧಿ ಸಮಿತಿ ಭೇಟಿ

ಬೆಳ್ತಂಗಡಿ: ತುಳುನಾಡಿನ ಆರಾಧ್ಯ ಶಕ್ತಿಗಳ ನೆಲೆವೀಡಾದ ಐತಿಹಾಸಿಕ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಯಿ ಬೈದೇತಿ ಆಯುರ್ವೇದಿಕ್ ಕೇಂದ್ರ, ಸಮುದಾಯ ಭವನ ಹಾಗೂ ಯಾತ್ರಿ ನಿವಾಸದ ಅಭಿವೃದ್ಧಿ ಕಾಮಗಾರಿಗಳಿಗೆ ಭಕ್ತರ ಹಾಗೂ ದಾನಿಗಳ ಸಹಕಾರ ಕೋರಲು ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಸಮಿತಿಯ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಸಂಪರ್ಕ ಅಭಿಯಾನ ನಡೆಯಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಎನ್ನುವುದು ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ; ಅದು ತುಳುನಾಡಿನ ಇತಿಹಾಸ, ಪರಂಪರೆ, ನಂಬಿಕೆ, ಭಕ್ತಿ ಹಾಗೂ ಕೋಟಿ ಕೋಟಿ ಭಕ್ತರ ಆರಾಧನೆಯ ಶ್ರದ್ಧಾಕೇಂದ್ರವಾಗಿದೆ. ಕ್ಷೇತ್ರದ ಪರಿವಾರ ಶಕ್ತಿಗಳ ದೈವಿಕ ಅನುಗ್ರಹ ಮತ್ತು ಭಕ್ತರ ಅಚಲ ನಂಬಿಕೆಯ ಫಲವಾಗಿ ಇಂದು ಈ ಕ್ಷೇತ್ರವು ಹಂತ ಹಂತವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ.

ಕ್ಷೇತ್ರದ ನಿರ್ಮಾಣ ಮತ್ತು ಹಿಂದಿನ ಅಭಿವೃದ್ಧಿ ಕಾರ್ಯಗಳು ಊರಿನ, ಪರವೂರಿನ ಹಾಗೂ ದೇಶ-ವಿದೇಶಗಳ ಭಕ್ತಾದಿಗಳ ತನು, ಮನ, ಧನದ ಸಹಕಾರದಿಂದಲೇ ಸಾಕಾರಗೊಂಡಿವೆ. ಇದೇ ಪರಂಪರೆಯನ್ನು ಮುಂದುವರಿಸಿಕೊಂಡು, ಮುಂದಿನ ಪೀಳಿಗೆಯ ಭಕ್ತರಿಗೆ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಆಯುರ್ವೇದಿಕ್ ಕೇಂದ್ರ, ಸಮುದಾಯ ಭವನ ಮತ್ತು ಯಾತ್ರಿ ನಿವಾಸದಂತಹ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಅವರು ತಂಡದೊಂದಿಗೆ ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿರುವ ಭಕ್ತರು, ಸಮಾಜದ ಗಣ್ಯರು ಹಾಗೂ ದಾನಿಗಳ ಮನೆಗಳಿಗೆ ಭೇಟಿ ನೀಡಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿ, ಈ ಪುಣ್ಯ ಕಾರ್ಯದಲ್ಲಿ ತನು, ಮನ, ಧನದ ಸಹಕಾರ ನೀಡುವಂತೆ ಆತ್ಮೀಯವಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಡಿಪಿರೆ ಮನೆಯ ಪ್ರಭಾಕರ ಬಂಗೇರ, ತಣ್ಣೀರುಪಂತದ ಕೇಶವತಿ ನಾರಾಯಣ ಪೂಜಾರಿ, ಪಾಂಡವರಕಲ್ಲಿನ ಜಯ ಬಂಗೇರ, ಯುವ ಉದ್ಯಮಿ ಹಾಗೂ ಶ್ರೀ ಗುರುನಾರಾಯಣ ಸೇವಾ ಸಂಘ ಪಾರೆಂಕಿಯ ಗೌರವಾಧ್ಯಕ್ಷರೂ ಮತ್ತು ಕೋರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ನಿವೃತ್ತ ಪೊಲೀಸ್ ಅಧಿಕಾರಿ ಎಂ. ಸುದರ್ಶನ್, ಉಪ್ಪಿನಂಗಡಿಯ ಉದ್ಯಮಿ ಕರುಣಾಕರ ಸುವರ್ಣ, ಜಗನ್ನಾಥ ಪೂಜಾರಿ, ವಿನೋಧಿನಿ ರಾಮಪ್ಪ, ಬೆಳ್ತಂಗಡಿಯ ರಾಜಶ್ರೀ ರಮಣ್, ನಿವೃತ್ತ ಹಿರಿಯ ಇಂಜಿನಿಯರ್ ಕೆ. ರಾಘವ ಪೂಜಾರಿ ಹಾಗೂ ನಿರೂಪ ಬಾನುಪ್ರಸನ್ನ ಅವರ ಮನೆಗಳಿಗೆ ಭೇಟಿ ನೀಡಿ ಸಹಕಾರ ಕೋರಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಿತ್ಯಾನಂದ ನಾವರ, ಶ್ರೀ ನಾರಾಯಣ ಮಚ್ಚಿನ ಹಾಗೂ ಶ್ರೀ ಜಯವಿಕ್ರಮ ಕಲ್ಲಾಪು ಅವರು ಉಪಸ್ಥಿತರಿದ್ದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕರಿಸಿದರು

ಈ ಸಂದರ್ಭದಲ್ಲಿ ಕೋರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಕಡ್ತಿಲ ಅವರು ಅಭಿವೃದ್ಧಿ ಸಮಿತಿಯ ಈ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಇಂದು ತಾವು ಮನೆಮನೆಗೆ ಭೇಟಿ ನೀಡಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಕೋರುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಹಿತಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಬದಲಾಗಿ ಮುಂದಿನ ತಲೆಮಾರುಗಳ ಶ್ರೀ ಕ್ಷೇತ್ರದ ಭಕ್ತರಿಗೆ ಅನುಕೂಲವಾಗುವಂತಹ ಶಾಶ್ವತ ಸೇವೆಯಾಗಿದೆ. ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಮಾಜಕ್ಕಾಗಿ, ಊರಿಗಾಗಿ ಹಾಗೂ ಧಾರ್ಮಿಕ ಕ್ಷೇತ್ರದ ಒಳಿತಿಗಾಗಿ ಪುಣ್ಯದ ಗಂಟನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವಾ ಮನೋಭಾವದಿಂದ ನಡೆಯುವ ಕಾರ್ಯಗಳು ನಿಜಕ್ಕೂ ಮಾದರಿಯಾಗಿವೆ” ಎಂದು ತಮ್ಮ ಮೆಚ್ಚುಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರ ಈ ಹೃದಯಪೂರ್ವಕ ಮಾತುಗಳು ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮತ್ತು ಆತ್ಮಸ್ಥೈರ್ಯವನ್ನು ತುಂಬಿದವು. ಕ್ಷೇತ್ರದ ಅಭಿವೃದ್ಧಿಯೆಂಬುದು ಒಬ್ಬಿಬ್ಬರ ಜವಾಬ್ದಾರಿಯಲ್ಲ, ಅದು ಸಮಸ್ತ ಭಕ್ತ ಸಮುದಾಯದ ಸಾಮೂಹಿಕ ಹೊಣೆಗಾರಿಕೆ ಎಂಬ ಸಂದೇಶಕ್ಕೆ ಅವರ ಮಾತುಗಳು ಸಾಕ್ಷಿಯಾದವು.

ಕ್ಷೇತ್ರದ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ; ಅದು ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರೆ ಮತ್ತು ಮುಂದಿನ ತಲೆಮಾರಿನ ಭಕ್ತರಿಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಇಂದು ನಾವು ನಿರ್ಮಿಸುವ ಈ ಸೌಲಭ್ಯಗಳು ನಾಳೆ ಸಾವಿರಾರು ಭಕ್ತರ ಸೇವೆಗೆ, ಆರೋಗ್ಯದ ಹಿತಕ್ಕೆ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆಸರೆಯಾಗಲಿವೆ. ವಿಶೇಷವಾಗಿ ದೇಯಿ ಬೈದೇತಿಯವರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುರ್ವೇದಿಕ್ ಕೇಂದ್ರವು ಆರೋಗ್ಯ ಸೇವೆಯ ಮೂಲಕ ಸಮಾಜಕ್ಕೆ ಉಪಯುಕ್ತವಾಗುವ ಮಹತ್ವದ ಯೋಜನೆಯಾಗಿದೆ.

ಶ್ರೀ ಕ್ಷೇತ್ರದ ದೈವಿಕ ಶಕ್ತಿ ಮತ್ತು ಭಕ್ತರ ನಂಬಿಕೆ ಒಂದಾದಾಗ ಅಸಾಧ್ಯವೆನಿಸುವ ಕಾರ್ಯಗಳೂ ಸಾಧ್ಯವಾಗುತ್ತವೆ. ಕ್ಷೇತ್ರದ ಪರಿವಾರ ಶಕ್ತಿಗಳ ಅನುಗ್ರಹದಿಂದಲೇ ಈ ಪುಣ್ಯ ಕಾರ್ಯಗಳು ಆರಂಭಗೊಂಡಿದ್ದು, ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕ್ಷೇತ್ರದ ಅಭಿವೃದ್ಧಿಗೆ ನೀಡುವ ಪ್ರತಿಯೊಂದು ಅಳಿಲು ಸೇವೆಯೂ ಭಕ್ತಿಯ ಸಮರ್ಪಣೆಯಾಗಿದೆ. ಅದು ಕೇವಲ ದೇಣಿಗೆಯಲ್ಲ, ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಸ್ತಿಯಾಗಿದೆ.

ಆದ್ದರಿಂದ ಬೆಳ್ತಂಗಡಿ ತಾಲೂಕು ಸೇರಿದಂತೆ ಊರಿನ, ಪರವೂರಿನ ಸಮಸ್ತ ಭಕ್ತಾದಿಗಳು, ದಾನಿಗಳು, ಉದ್ಯಮಿಗಳು ಹಾಗೂ ಸಮಾಜದ ಹಿತೈಷಿಗಳು ಶ್ರೀ ಕ್ಷೇತ್ರದ ಈ ಮಹತ್ಕಾರ್ಯದಲ್ಲಿ ತಮ್ಮ ಕೈಲಾದ ಸಹಕಾರವನ್ನು ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕೈಜೋಡಿಸಬೇಕೆಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಸಮಿತಿ ವಿನಮ್ರವಾಗಿ ಮನವಿ ಮಾಡಿದೆ.

ಕ್ಷೇತ್ರದ ಸೇವೆ ನಮ್ಮೆಲ್ಲರ ಭಾಗ್ಯ, ಕ್ಷೇತ್ರದ ಅಭಿವೃದ್ಧಿ ನಮ್ಮೆಲ್ಲರ ಹೊಣೆಗಾರಿಕೆ. ದೈವಿಕ ಅನುಗ್ರಹದೊಂದಿಗೆ ಭಕ್ತರ ಒಗ್ಗಟ್ಟಿನಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇನ್ನಷ್ಟು ವೈಭವದಿಂದ ಬೆಳಗಲಿ ಎಂಬುದೇ ಎಲ್ಲರ ಆಶಯ.

Related posts

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಾಮಾಜಿಕ ಅರಣ್ಯೀಕರಣ ಗಿಡ ನಾಟಿ ಕಾರ್ಯಕ್ರಮ

Suddi Udaya

ಜಿಲ್ಲೆಯ ಹಾಸ್ಟೇಲ್‌ಗಳ ಸ್ಥಿತಿಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್‌ ಪ್ರಶ್ನೆ

Suddi Udaya

ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಭೇಟೆ – ಕೊವಿ ಸಹಿತ ಮೂವರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಅರಣ್ಯ ಇಲಾಖೆ

Suddi Udaya

ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ: ಮಂಪರ್ ಪರೀಕ್ಷೆ-ಬ್ರೈನ್ ಮ್ಯಾಪಿಂಗ್ ಗೆ ಆರೋಪಿಗಳ ನಕಾರ

Suddi Udaya

ಮುಂಡಾಜೆಯಲ್ಲಿ ಕೂಲಿ ಕೆಲಸಕ್ಕೆ ಹೋದ ಮಹಿಳೆ ಕುಸಿದು ಬಿದ್ದು ಮೃತ್ಯು

Suddi Udaya
error: Content is protected !!