ಕಕ್ಯಪದವು: 2026-27ನೇ ಸಾಲಿನ ವಾಮದಪದವು ವಲಯ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭವು ನ.12ರಂದು ಎಲ್.ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿ, ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ರಮಾನಂದ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೊ, ಪ್ರತಿಭಾ ಕಾರಂಜಿ ನಿರ್ವಹಣಾ ತಂಡದ ಸದಸ್ಯರು, ಶಾಲಾ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ವಿಜಯ ಕೆ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಂಯೋಜಕರಾದ ರಮಾನಂದ್ ಅವರು ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರತಿಭಾ ಕಾರಂಜಿಯಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು ಹಾಗೂ ಮುಖ್ಯೋಪಾಧ್ಯಾಯಿನಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ, ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಈ ವರ್ಷದ ವಾಮದಪದವು ವಲಯ ಮಟ್ಟದ ಪ್ರತಿಭಾ ಕಾರಂಜಿಯ ಸಮಗ್ರ ಪ್ರಶಸ್ತಿಯ ಫಲಿತಾಂಶವನ್ನು ಪ್ರಕಟಿಸಲಾಯಿತು.
ಎಲ್.ಸಿ.ಆರ್ ಇಂಡಿಯನ್ ಸ್ಕೂಲ್, ಕಕ್ಯಪದವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಓಂ ಜನಹಿತಾಯ ಶಾಲೆ, ಗುಡ್ಡೆಯಂಗಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಜೇತ ಶಾಲೆಗಳ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯ ಯಶಸ್ವಿ ಆಯೋಜನೆಗೆ ಸಹಕರಿಸಿದ ನಿರ್ವಹಣಾ ತಂಡದ ಸದಸ್ಯರನ್ನು ಶಾಲೆಯ ವತಿಯಿಂದ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಪ್ರಶಾಂತ್ ಕೆ. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು. ಈ ಮೂಲಕ ಪ್ರತಿಭೆಗಳಿಗೆ ವೇದಿಕೆಯಾಗಿ, ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕಲಾಸಕ್ತಿಗೆ ಪ್ರೋತ್ಸಾಹ ನೀಡಿದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭವು ಸಂತಸ ಹಾಗೂ ಸಂಭ್ರಮದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.















