25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ದಿನೇಶ್ ಚೌಟ ಮಾತನಾಡಿ ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳ ಪ್ರಿತಿ ಮತ್ತು ಅಭಿಮಾನಗಳ ಧ್ಯೋತಕವಾಗಿದೆ. ಡಾ ರಾಧಾಕೃಷ್ಣ ಅವರ ಜ್ಞಾನ ಮತ್ತು ಸಾಧನೆ ಶಿಕ್ಷಣ ವೃತ್ತಿಯಲ್ಲಿರುವ ನಮಗೆಲ್ಲರಿಗೂ ಮಾದರಿ. ಅವರು ಮೇಧಾವಿಗಳಾಗಿದ್ದರೂ ತಮ್ಮ ವಿದ್ಯಾರ್ಥಿಗಳೊಂದಿಗೆ ಸರಳತೆ ಮತ್ತು ಸಜ್ಜನಿಕೆಯೊಂದಿಗೆ ನಡೆದುಕೊಳ್ಳುತ್ತಿದ್ದರು. ಅವರ ವಿದ್ಯಾರ್ಥಿಗಳಿಂದ ಅವರಿಗೆ ಸಿಕ್ಕ ಪ್ರೀತಿ ಮತ್ತು ಗೌರವ ಎಲ್ಲಾ ಶಿಕ್ಷರಿಗೂ ಸಲ್ಲಬೇಕೆನ್ನುವ ಅವರ ಆಶಯವೇ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಕಾರಣವಾಯಿತು ಎಂದರು.

ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಗುರುವನ್ನು ಪಡೆಯಲು ಹಾಗೂ ಒಳ್ಳೆಯ ಶಿಷ್ಯವೃಂದವನ್ನು ಪಡೆಯಲು ಯೋಗ ಬೇಕು. ನಾನು ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದಾಗ ನನಗೆ ಪಾಠ ಮಾಡಿದ ಗುರುಗಳೇ ನನ್ನ ಸಹೋದ್ಯೋಗಿಗಳಾಗಿದ್ದರು. ಈ ರೀತಿ ನಮ್ಮ ವಿಭಾಗದಲ್ಲಿ ನಾಲ್ಕು ತಲೆಮಾರುಗಳ ಗುರು ಶಿಷ್ಯ ಪರಂಪರೆ ಇತ್ತು. ನನ್ನನ್ನು ಆ ಸಂದರ್ಭದಲ್ಲಿ ಕೈ ಹಿಡಿದು ನಡೆಸಿದ ಗುರುಗಳಿಗೆ ನಾನು ಋಣಿ ಎಂದರು. ನನ್ನ ಗುರುಗಳ ಕರ್ತವ್ಯ ಪ್ರಜ್ಞೆ, ಶಿಷ್ಯರೆಡೆಗೆ ಅವರು ತೋರುವ ಪ್ರೀತಿ ನನಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಏನೇ ಕಷ್ಟ ಬಂದರೂ ಅದನ್ನು ಎದುರಿಸಲು ತಯಾರಿರಬೇಕು. ಅದು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಕೊಡೆ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಮಳೆಯಿಂದ ರಕ್ಷಣೆ ನೀಡುತ್ತದೆ. ಈ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಿಗುವ ಸಂಸ್ಕಾರ ಮುಂದೆ ಬದುಕನ್ನು ಎದುರಿಸಲು ನಿಮಗೆ ದಾರಿ ದೀಪವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಮೂಡು ಮಾರ್ನಾಡಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಾ. ರಾಜಶ್ರೀ ಬಿ ಮಾತನಾಡಿ ಧನಕನಕಾದಿಗಳಿಂದ ಬದುಕು ಭವ್ಯವಾಗಬಲ್ಲದೇ ಹೊರತು ದಿವ್ಯವಾಗುವುದಿಲ್ಲ. ಜೀವನದಲ್ಲಿ ಹಣ ಗಳಿಸುವುದು ಇದ್ದೇ ಇದೆ. ಆದರೆ ಸಮಾಜಕ್ಕೆ ಕೊಡುಗೆ ನೀಡುವುದರ ಕುರಿತು ಕೂಡ ತಮ್ಮ ಗಮನವಿರಲಿ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಜೀವನವನ್ನು ಬೆಳಗಿಸಿಕೊಂಡು ಹೋಗುವುದೇ ಗುರುಗಳಾದವರಿಗೆ ಕೊಡಬಹುದಾದ ದೊಡ್ಡ ಗುರುದಕ್ಷಿಣೆ ಎಂದರು.

ಸನ್ಮಾನಕ್ಕೆ ಉತ್ತರಿಸಿದ ರಾಷ್ಟ್ರಮಟ್ಟದ ವಿಕಸನ ತರಬೇತುದಾರರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕ ಜೇಸಿ ರಾಜೇಂದ್ರ ಭಟ್ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ತನ್ನ ಬುದ್ಧಿವಂತಿಕೆಯ ಅನುಸಾರ ತಾನು ಬೇರೆ ಕೋರ್ಸುಗಳನ್ನು ಆಯ್ಕೆ ಮಾಡಲು ಅವಕಾಶವಿದ್ದರೂ ಶಿಕ್ಷಕಿಯಾಗಿದ್ದ ತನ್ನ ತಾಯಿಗೆ ಸಮಾಜದಲ್ಲಿ ಸಿಗುತ್ತಿದ್ದ ಗೌರವಾದರಗಳನ್ನು ಕಂಡು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ. ಭಾರತ ಗುರು ಪರಂಪರೆಗೆ ಹೆಸರುವಾಸಿಯಾಗಿದೆ. ಜಗತ್ತಿನ ಶ್ರೇಷ್ಟ ವಿಶ್ವ ವಿದ್ಯಾನಿಲಯಗಳಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳು ಒಂದು ಕಾಲದಲ್ಲಿ ಭಾರತದಲ್ಲಿತ್ತು. ವಿದೇಶಿಗರ ಆಕ್ರಮಾಣದಿಂದ ಭಾರತದ ಜ್ಞಾನ ಸಂಪತ್ತು ನಾಶವಾದರೂ ಗುರುವಿನ ಛಲದಿಂದ ಕೆಲವೇ ವರ್ಷಗಳಲ್ಲಿ ಅದನ್ನು ಮರುಕಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇದು ಪ್ರಪಂಚದಲ್ಲಿ ಎಲ್ಲೂ ನಡೆದಿಲ್ಲ. ಅವತಾರ ಪುರುಷರಿಗೂ ಗುರುಗಳಿದ್ದರು ಎಂಬುದೇ ನಮ್ಮ ದೇಶದ ಗುರುಪರಂಪರೆಯ ಮಹತ್ವಕ್ಕೆ ಸಾಕ್ಷಿ. ಕೇವಲ ಪಾಠಕ್ಕೆ ಸೀಮಿತವಾಗಿರದೆ ಜೀವನಕ್ಕೆ ಸಜ್ಜುಗೊಳಿಸುವವನೇ ನಿಜವಾದ ಗುರು ಎಂದರು.

ಉಜಿರೆ ಎಸ್‌ಡಿಎಂ ಕಾಲೇಜಿನ ಸಹ ಪ್ರಾಧ್ಯಾಪಕ ಗಜಾನನ ಆರ್ ಭಟ್ ಸನ್ಮಾನಕ್ಕೆ ಉತ್ತರಿಸುತ್ತಾ ತಾನು ಕರ್ತವ್ಯ ನಿಷ್ಠೆಗೆ ಹೆಸರಾದ ಅನೇಕ ಹಿರಿಯ ಶಿಕ್ಷಕರಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದೇನೆ. ಬದುಕಿನಲ್ಲಿ ಜ್ಞಾನವನ್ನು ಗಳಿಸಲು ಕಷ್ಟಪಡಲೇ ಬೇಕು. ಕಷ್ಟ ಸಹುಷ್ಣುತೆ ಇದ್ದಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ. ಆಗ ಮಾತ್ರ ಸಾಧನೆ ಸಾಧ್ಯ. ಪ್ರಾಮಾಣಿಕತೆಯಿಂದ ಒಂದು ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯಬಹುದು ಅನ್ನುವುದಕ್ಕೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯೇ ಸಾಕ್ಷಿ ಎಂದರು.

ಸನ್ಮಾನಿತರಾದ ಎಸ್‌ಡಿಎಂ ಕಾಲೇಜಿನ ಉಪಪ್ರಾಂಶುಪಾಲೆ ನಂದಾ ಕುಮಾರಿ ಕೆಪಿ ಮಾತನಾಡಿ ಈ ಕಲ್ಲಬೆಟ್ಟುವಿನ ಕಲ್ಲು ಕಲ್ಲುಗಳಲ್ಲಿ ಹೂವುಗಳನ್ನು ಅರಳಿಸುವ ಕೆಲಸವನ್ನು ಯುವರಾಜ ಜೈನ್ ರಶ್ಮಿತಾ ಜೈನ್ ದಂಪತಿಗಳು ಮಾಡಿದ್ದಾರೆ. ಈ ಸಂಸ್ಥೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ನನ್ನ ವಿದ್ಯಾರ್ಥಿಯ ಸಾಧನೆಗೆ ಹೃದಯ ತುಂಬಿ ಬಂದಿದೆ. ವಿದ್ಯೆಗೆ ವಿನಯವೇ ಭೂಷಣ ಅನ್ನುವ ಮಾತಿನಂತೆ ಸಾಧನೆಗೆ ಗುರುಗಳೇ ಕಾರಣ ಅನ್ನುವ ಅವರ ಮನೋಭಾವವೇ ಅವರನ್ನು ಈ ಎತ್ತರಕ್ಕೇರಿಸಿದೆ. ಈ ಸಂಸ್ಥೆ ಇನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಗಳಲ್ಲೂ ಬೆಳಗಲಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸದಾ ಕಾರ್ಯಪ್ರವೃತ್ತರಾಗಿರುವ ಶಿಕ್ಷಕರು ಜಗತ್ತಿನಾದ್ಯಂತ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಯ ಉದ್ಧಾರ ಆಗಬೇಕೆಂದರೆ ಗುರುವಿನ ಸಾಂಗತ್ಯ ಇರಲೇಬೇಕು. ಹಾಗಾಗಿ ಗುರು ಶಿಷ್ಯ ಸಂಬಂಧ ಈ ಹಿಂದಿನಂತೆಯೇ ನಡೆದುಕೊಂಡು ಬಂದಿದೆ ಎಂದರು. ತಮ್ಮ ಬದುಕಿನಲ್ಲಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ಗುರುಗಳನ್ನು ಹಾಗೂ ಸಂಸ್ಥೆಯಲ್ಲಿ ಕಾರ್ಯನಿರತರಾಗಿರುವ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಸಂಸ್ಥೆಯ ಮಾಸಪತ್ರಿಕೆ ಮನೋರಮಾ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. 100 ಅಂಕ ತೆಗೆದ ವಿಷಯವಾರು ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪದವಿಪೂರ್ವ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವಂದಿಸಿದರು. ಉಪನ್ಯಾಸಕರಾದ ಯಶಸ್ವಿನಿ ಮತ್ತು ದಿವ್ಯಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್, ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ವತಿಯಿಂದ ಪೂಲ್ ಕ್ಯಾಂಪಸ್ ಡ್ರೈವ್

Suddi Udaya

ಕೊಯ್ಯೂರು ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya

ಭಾರತೀಯ ಜನತಾ ಪಾರ್ಟಿಯ ಮೂವರು ಪಕ್ಷದ ಸದಸ್ಯತ್ವದಿಂದ ಅಮಾನತು: ನೆರಿಯ ಗ್ರಾ.ಪಂ ಅಧ್ಯಕ್ಷೆ ಸೇರಿ ಇಬ್ಬರು ಸದಸ್ಯರಿಗೆ ಗೆಟ್ ಪಾಸ್ ನೀಡಿದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರು

Suddi Udaya

ಮದ್ದಡ್ಕತಾಯಿ ಪಿಲಿ ಚಾಮುಂಡಿ ದೈವದ ವರ್ಷವಾದಿ ನೇವೋತ್ಸವ

Suddi Udaya

ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಬಾಡಿಗೆದಾರರಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!