ಇಂದಬೆಟ್ಟು: ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಪಾದಯಾತ್ರೆ ಆರಂಭಗೊಂಡು ರಾಜಬೀದಿಯಲ್ಲಿ ಭ್ರಷ್ಟಾ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಘೋಷಣೆ ಕೂಗುತ್ತ ಆಗಮಿಸಿ ಇಂದಬೆಟ್ಟು ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು ರವರು ಮಾತನಾಡಿ ಸ್ಥಳೀಯ ವಿಚಾರಗಳನ್ನು ಗ್ರಾಮದ ಅಭಿವೃದ್ಧಿಗೆ ಕೈಗೊಂಡ ಕಾಮಗಾರಿಗಳ ಮಾಹಿತಿಯನ್ನು ವಿವರವಾಗಿ ಸಭೆಗೆ ಮಂಡಿಸಿದರು. ಇಂದಬೆಟ್ಟು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ 5 ವರ್ಷಗಳಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಆಡಳಿತ, ಶಾಸಕ ಹರೀಶ್ ಪೂಂಜ ನೀಡಿದ ಅನುದಾನದ ವಿವರಗಳನ್ನು ಮುಂದಿನ ದಿನಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ತಿಳಿಸಲಾಗುವುದು, ಇಂದಬೆಟ್ಟು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ತಂಡ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಸಂಕಲ್ಪ, ಹರೀಶ್ ಪೂಂಜ ರವರ ವಿಕಸಿತ ಬೆಳ್ತಂಗಡಿಗೆ ವಿಕಸಿತ ಇಂದಬೆಟ್ಟು ಗ್ರಾಮಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ವಸಂತ ಗೌಡ ಕಲ್ಲಾಜೆ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಮಾಹಿತಿಯನ್ನು ಸಭೆಗೆ ಮಂಡಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆಯಲು ಬೋಗಸ್ ಗ್ಯಾರಂಟಿಗಳು ಘೋಷಿಸಿ ಈಗ ಜನರಿಗೆ ಎಲ್ಲಾ ಅಗತ್ಯ ವಸ್ತುಗಳ ದರ ಏರಿಕೆ ಮಾಡಿ ಜನರ ಜೀವನವನ್ನು ನರಕವಾಗಿಸಿದೆ, ಅಭಿವೃದ್ಧಿಗೆ ಅನುದಾನವನ್ನು ನೀಡುತ್ತಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು, ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಅದರಲ್ಲೂ ಭ್ರಷ್ಟಾಚಾರ ಮಾಡಿದೆ. ದೇಶದ ಇತಿಹಾಸದಲ್ಲಿ ದಲಿತರ ಅನುದಾನವನ್ನು ದುರುಪಯೋಗ ಪಡಿಸಿದ ಸರ್ಕಾರ ಇದ್ದರೆ ಅದು ದಲಿತ ದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರ. ಮುಂದಿನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೋಟ್ ಕೇಳಲು ಮನೆ ಬಾಗಿಲಿಗೆ ಬಂದಾಗ ಇವರ ದುರಾಡಳಿತದ ಬಗ್ಗೆ ಮನೆಯ ಎಲ್ಲಾ ಸದಸ್ಯರು ಸೇರಿ ಇವರನ್ನು ಪ್ರಶ್ನೆ ಮಾಡಬೇಕು ಎಂದರು. ಇಂದಬೆಟ್ಟು ಗ್ರಾಮದ ವಿವಿಧ ಪ್ರದೇಶಗಳ ರಸ್ತೆ ಅಭಿವೃದ್ಧಿಗಾಗಿ ಜನರ ಮನವಿ ಪತ್ರವನ್ನು ಸ್ವೀಕರಿಸಿ ಮುಂದಿನ 1 ವರ್ಷದಲ್ಲಿ ಸಿಗುವ ಲಭ್ಯ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸಲಾಗುವುದು, 2028 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು ಈ ಸಂದರ್ಭದಲ್ಲಿ ಇಂದಬೆಟ್ಟು ಗ್ರಾಮದ ಎಲ್ಲಾ ಮಣ್ಣಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ತಮ್ಮ ಬೇಡಿಕೆಗಳನ್ನು ಪ್ರಥಮ ಅದ್ಯತೆಯಲ್ಲಿ ಈಡೇರಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರ ನೇತೃತ್ವದಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಕಛೇರಿಗೆ ತೆರಳಿ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮನ್ ಕೀ ಬಾತ್ ಜಿಲ್ಲಾ ಸಂಯೋಜಕರಾದ ಸೀತರಾಮ್ ಬೆಳಾಲ್, ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ, ಮಂಡಲ ಕೋಶಾಧಿಕಾರಿ ಜಯಂತ ಗೌಡ, ಲಾಯಿಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಎಸ್.ಸಿ ಮೋರ್ಚಾ ಕಾರ್ಯದರ್ಶಿ ಲಕ್ಷಣ್, ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ನಿಕಟಪೂರ್ವ ಪಂಚಾಯತ್ ಅಧ್ಯಕ್ಷರಾದ ಅನಂದ ಅಡಿಲು, ಆಶಾಲತಾ, ಸದಸ್ಯರಾದ ಸತೀಶ್ ಗೌಡ ಚೌಕದಕಟ್ಟೆ, ಪ್ರಮೋದ್ ಕುಮಾರ್, ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷರಾದ ಪಳನಿ ಸ್ವಾಮಿ, ಯುವ ಮೋರ್ಚಾ ಸದಸ್ಯರಾದ ಸಂತೋಷ್ ಕುಮಾರ್ ಉಂಬೇಜೆ, ಶೈಲೇಶ್ ಗೌಡ ಮನ್ನಡ್ಕ, ಬೂತ್ ಅಧ್ಯಕ್ಷರುಗಳಾದ ಶಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಸು, ನಿತೇಶ್ ಕಡಿತ್ಯಾರು, ನವೀನ್ ಜೈನ್, ಕಾರ್ಯದರ್ಶಿಗಳಾದ ರಕ್ಷಿತ್ ಲಿಂಗತ್ಯಾರು, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ಸಿ.ಎ. ಬ್ಯಾಂಕ್, ಹಾಲಿನ ಸೊಸೈಟಿ ನಿರ್ದೇಶಕರು, ಪಕ್ಷದ ವಿವಿಧ ಜವಾಬ್ದಾರಿಗಳ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಂದೇ ಮಾತರಂ ಗೀತೆಯನ್ನು ಚಂದ್ರಶೇಖರ ಇಂದಬೆಟ್ಟು ರವರು ಹಾಡಿದರು, ಕಾರ್ಯಕ್ರಮವನ್ನು ಸತೀಶ್ ಗೌಡ ಮನ್ನಡ್ಕ ನಿರೂಪಿಸಿದರು.













